ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರಿನಲ್ಲಿ 11 ದಿನಗಳ ಕಾಲ ಭಕ್ತಿ-ಭಾವ, ಸಾಂಸ್ಕೃತಿಕ ವೈಭವ, ಜನಪದ ಕಲೆಗಳ ಸಂಭ್ರಮದಿಂದ ಕೂಡಿದ ದಸರಾ ಉತ್ಸವವು ವಿಜೃಂಭಣೆಯಿಂದ ನೆರವೇರಿತು. ಉತ್ಸವದ ಯಶಸ್ವಿ ಆಯೋಜನೆಗೆ ಶ್ರಮಿಸಿದ ಎಲ್ಲಾ ಇಲಾಖೆಗಳನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಶ್ಲಾಘಿಸಿದರು. ದಸರಾ ಹಬ್ಬದ ಕಡೆಯ ದಿನವಾದ ವಿಜಯದಶಮಿಯಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಧಾರ್ಮಿಕ ಮಂಟಪದಲ್ಲಿ ಜರುಗಿದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತ ರಸಸಂಜೆ ಕಾರ್ಯಕ್ರಮದ ನಂತರ ದಸರಾ ಉತ್ಸವದ ಯಶಸ್ವಿ ಆಚರಣೆ ಕುರಿತು ಮಾತನಾಡಿದರು.ತುಮಕೂರು ದಸರಾ ಉತ್ಸವದ ೨ನೇ ವರ್ಷದ ಆಚರಣೆಯಿಂದ ಜಿಲ್ಲೆಯ ಕೀರ್ತಿ ಮತ್ತಷ್ಟು ಹೆಚ್ಚಿದಂತಾಗಿದೆ ಎಂದರಲ್ಲದೆ. ಕಾರ್ಯಕ್ರಮ ಸ್ಥಳದಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಸ್ವಚ್ಛತೆ, ಕುಡಿಯುವ ನೀರು, ಭದ್ರತೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಉತ್ಸವವು ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ನೆರವೇರಲು ಕಾರಣರಾದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಸಾರಿಗೆ, ಅಗ್ನಿಶಾಮಕ, ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖಾಧಿಕಾರಿ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿ, ದಸರಾ ಉತ್ಸವದ ವಿವಿಧ ಸಮಿತಿಗಳ ಸದಸ್ಯರನ್ನು ಗೌರವಿಸಿ ಸನ್ಮಾನಿಸಿದರು. ಇದಕ್ಕೂ ಮುನ್ನ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತು ಅವರ ತಂಡ ಪ್ರಸ್ತುತಪಡಿಸಿದ ಸಂಗೀತ ಕಾರ್ಯಕ್ರಮವು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಒಂದರ ಹಿಂದೆ ಮತ್ತೊಂದು ಹಿಟ್ ಹಾಡುಗಳಿಗೆ ಪ್ರೇಕ್ಷಕರು ಮಳೆಯನ್ನೂ ಲೆಕ್ಕಿಸದೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಜಗವೇ ನೀನು ಗೆಳತಿಯೇ, ಒಂದು ಮಳೆ ಬಿಲ್ಲು-ಒಂದು ಮಳೆ ಮೋಡ, ಇತ್ತೀಚೆಗೆ ವೈರಲ್ ಆಗಿರುವ ಹೂವಿನ ಬಾಣದಂತೆ, ಜೇನ ದನಿಯೋಳೆ ಎಂಬ ಮೆಲೋಡಿ ಸಾಂಗ್ಸ್, ಕಣ್ಣ ಮಣಿಯೇ... ಹಾಡು ಕೇಳಿ ಜನರು ತಲೆದೂಗುತ್ತಾ ಆಸ್ವಾದಿಸಿದರು. ಇದೇ ವೇಳೆ ವೇದಿಕೆಯಲ್ಲಿ ನಮ್ಮೂರ ಕಾಯೋ ದೊರೆಯೇ ನಿನಗೆ ಎಂಬ ಹಾಡಿಗೆ ವಿಶ್ವ ದಾಖಲೆ ನಿರ್ಮಿಸಿರುವ ಕಲಾವಿದ ಪುನೀತ್ ಅವರು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ಭಾವಚಿತ್ರವನ್ನು 5 ನಿಮಿಷಗಳಲ್ಲಿ ಚಿತ್ರಿಸಿದ್ದು ವಿಶೇಷವಾಗಿತ್ತು. ಚಿತ್ರಿಸಿದ ಭಾವಚಿತ್ರವನ್ನು ಸಚಿವರಿಗೆ ಉಡುಗೊರೆಯಾಗಿ ನೀಡಲಾಯಿತು.ನಂತರ ಎಲ್‌ಇಡಿ ಪರದೆಯಲ್ಲಿ ತುಮಕೂರಿನ ವಿಶೇಷತೆ ಉಳ್ಳ ಲೇಸರ್ ಶೋ ಪ್ರದರ್ಶನ ಪ್ರೇಕ್ಷಕರ ಮನ ಸೆಳೆಯಿತು. ರಾತ್ರಿ ಹಸಿರು ಸಿಡಿ ಮದ್ದುಗಳನ್ನು ಸಿಡಿಸುವುದರೊಂದಿಗೆ 11 ದಿನಗಳ ಉತ್ಸವಕ್ಕೆ ತೆರೆ ಎಳೆಯಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.