ತುಮಕೂರು ದಸರಾ ಜ್ಞಾನ ವೈಭವದ ಪ್ರತೀಕ

| Published : Sep 23 2025, 01:03 AM IST

ಸಾರಾಂಶ

ನಾಡಹಬ್ಬ ದಸರಾ ಕೇವಲ ಧಾರ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿರುವ ಜ್ಞಾನ ವೈಭವದ ಉತ್ಸವವಾಗಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು

ನಾಡಹಬ್ಬ ದಸರಾ ಕೇವಲ ಧಾರ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿರುವ ಜ್ಞಾನ ವೈಭವದ ಉತ್ಸವವಾಗಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಸೋಮವಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಹಾಸ್ಯ ಚಕ್ರವರ್ತಿ ಟಿ.ಆರ್. ನರಸಿಂಹರಾಜು ಸಾಂಸ್ಕೃತಿಕ ದಸರಾ ವೈಭವ ವೇದಿಕೆ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿ, ನಮ್ಮ ಭಾವನೆಗಳನ್ನು ಶುದ್ಧಗೊಳಿಸುವುದೇ ನಾಡಹಬ್ಬ ದಸರಾ ಉತ್ಸವದ ಮಹತ್ವವಾಗಿದೆ ಎಂದು ಅವರು, ಪಕ್ಷಭೇದ ಮರೆತು ಎಲ್ಲಾ ಜನ ಪ್ರತಿನಿಧಿಗಳು, ಸಮಾಜದ ಎಲ್ಲ ವರ್ಗದವರು ಒಂದಾಗಿ ದಸರಾ ಉತ್ಸವವನ್ನು ಸಡಗರದಿಂದ ಆಚರಿಸುತ್ತಿರುವುದು ವಿಶೇಷವಾಗಿದೆ. ತುಮಕೂರು ದಸರಾ ಕಳೆದ ವರ್ಷದಿಂದ ಹೆಚ್ಚಿನ ಮೆರಗು ಪಡೆದುಕೊಂಡಿದ್ದು, ಈ ಬಾರಿ ಕಾರ್ಯಕ್ರಮಗಳು ಮತ್ತಷ್ಟು ವೈವಿಧ್ಯತೆಯಿಂದ ಕೂಡಿವೆ. ದಸರಾ ಹಬ್ಬವು ಅಧರ್ಮದ ವಿರುದ್ಧ ಧರ್ಮ ಮತ್ತು ಅಸತ್ಯದ ವಿರುದ್ಧ ಸತ್ಯದ ವಿಜಯವನ್ನು ಸೂಚಿಸುತ್ತದೆ. ನವರಾತ್ರಿಯ ಸುಸಂದರ್ಭದಲ್ಲಿ ಜಿಲ್ಲೆಯು ಸಮೃದ್ಧಿಯತ್ತ ಸಾಗಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಸ್ವಾಮೀಜಿ ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಾಡ ಹಬ್ಬ ದಸರಾ ಉತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ ಜನ-ಮನರಂಜನೆ ಮತ್ತು ಜ್ಞಾನಾರ್ಜನೆಗೂ ವೇದಿಕೆಯಾಗಿದೆ. ಈ ಬಾರಿ 11 ದಿನಗಳ ಕಾಲ ಆಚರಿಸಲ್ಪಡುವ ದಸರಾ ಉತ್ಸವದ ಅಂಗವಾಗಿ ಹೆಲಿ ರೈಡ್, ಹಾಟ್ ಏರ್ ಬಲೂನ್, ಪಂಜಿನ ಕವಾಯತು, ನಗರದ ಪ್ರಮುಖ ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ, ಅಂಬಾರಿ ಸಿಟಿ ಬಸ್ ಪಯಣ, ಕೃಷಿ ಮೇಳ, ಪುಸ್ತಕ ಮೇಳ, ವಿಜ್ಞಾನ ಮೇಳ ಸೇರಿದಂತೆ ವಿವಿಧ ಮೇಳಗಳನ್ನು ಆಯೋಜಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನರು ಭಾಗವಹಿಸಿ ಉತ್ಸವದ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು.