ತುಮಕೂರು: ಅಧಿಕಾರಿಗಳೊಂದಿಗೆ ಡೀಸಿ ಚುನಾವಣಾ ಸಭೆ

| Published : Feb 24 2024, 02:31 AM IST

ಸಾರಾಂಶ

ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಕೈಗೊಳ್ಳಬೇಕಾಗಿರುವ ಪೂರ್ವಭಾವಿ ಸಿದ್ಧತೆಗಳ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಚುನಾವಣೆಗೆ ನಿಯೋಜನೆಗೊಂಡಿರುವ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಕೈಗೊಳ್ಳಬೇಕಾಗಿರುವ ಪೂರ್ವಭಾವಿ ಸಿದ್ಧತೆಗಳ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಚುನಾವಣೆಗೆ ನಿಯೋಜನೆಗೊಂಡಿರುವ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದರಿ ನೀತಿ ಸಂಹಿತೆಯು ಭಾರತ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ ತಕ್ಷಣದಿಂದ ಜಾರಿಗೆ ಬರಲಿದ್ದು, ನೀತಿ ಸಂಹಿತೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ 42 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆ, ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸುವಿಕೆ, ಸೆಕ್ಟರ್‌ ಅಧಿಕಾರಿಗಳ ನೇಮಕ, ನಾಮಪತ್ರಗಳ ಸ್ವೀಕೃತಿ, ಮಸ್ಟರಿಂಗ್, ಡಿಮಸ್ಟರಿಂಗ್, ಎಸ್‌ಎಸ್‌ಟಿ, ಎಫ್‌ಎಸ್‌ಟಿ ತಂಡಗಳು, ಪೊಲೀಸ್ ಬಂದೋಬಸ್ತ್ ಇತರೆ ವ್ಯವಸ್ಥೆಗಳಿಗೆ ಕ್ರಮವಹಿಸುವಂತೆ ಸೂಚಿಸಿದರು.

ಸ್ವೀಪ್ ಸಮಿತಿ ವತಿಯಿಂದ ಕ್ಯಾಂಪಸ್ ಅಂಬಾಸಡರ್‌ಗಳನ್ನು ನೇಮಿಸುವಂತೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲೆಕ್ಟರೋಲ್ ಲಿಟರೇಸಿ ಕ್ಲಬ್ ಸ್ಥಾಪಿಸಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು. ಮಾನವ ಸಂಪನ್ಮೂಲ ನಿರ್ವಹಣೆ, ಸಿಬ್ಬಂದಿ ತರಬೇತಿ, ಚುನಾವಣಾ ಸಾಮಗ್ರಿಗಳ ನಿರ್ವಹಣೆ, ಸಾರಿಗೆ ವ್ಯವಸ್ಥೆ, ಗಣಕೀಕರಣ ಮತ್ತು ಸೈಬರ್‌ ಸೆಕ್ಯುರಿಟಿ, ಇವಿಎಂ ನಿರ್ವಹಣೆ, ಚುನಾವಣಾ ವೆಚ್ಚ ಪರಿವೀಕ್ಷಣೆ, ಪೋಸ್ಟಲ್ ಬ್ಯಾಲೆಟ್ ಮತ್ತು ಇಟಿಪಿಬಿಎಸ್‌ಗೆ ನೋಡಲ್ ಅಧಿಕಾರಿಗಳ ನೇಮಕ, ಮಾಧ್ಯಮ ನಿರ್ವಹಣೆ, ಸಂಪರ್ಕ ಯೋಜನೆ, ಮತಪಟ್ಟಿ ತಯಾರಿಕೆ, ದೂರು ನಿರ್ವಹಣಾ ಕೋಶ ಮತ್ತು ಸಹಾಯವಾಣಿ, ಪಿಡಬ್ಲ್ಯುಡಿ ಮತದಾರರು, ಮೈಕ್ರೋ ಅಬ್ಸವರ್ಸ್, ಚುನಾವಣಾ ವೀಕ್ಷಕರು, ಮತಗಟ್ಟೆಗಳು, ಮತ ಎಣಿಕೆ, ಮತದಾನ ಮುಂತಾದ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಯಾವುದೇ ಲೋಪದೋಷವಿಲ್ಲದ ಚುನಾವಣೆಗೆ ಎಲ್ಲರೂ ಸಹಕರಿಸುವಂತೆ ಅವರು ಈ ಸಂದರ್ಭ ಮನವಿ ಮಾಡಿದರು. ಎಂಸಿಎಂಸಿ ಸಮಿತಿ ಅಧ್ಯಕ್ಷರು, ಸದಸ್ಯರಿಗೆ ತರಬೇತಿ

ಮುಂಬರುವ ಸಾರ್ವತ್ರಿಕ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮಾಧ್ಯಮ ಪ್ರಮಾಣೀಕರಣ ಮತ್ತು ಪರಿವೀಕ್ಷಣಾ ಸಮಿತಿ(ಎಂಸಿಎಂಸಿ)ಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ರಾಜ್ಯ ಚುನಾವಣಾ ಆಯೋಗದ ವತಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಲಾಯಿತು.

ಜಿಲ್ಲಾಧಿಕಾರಿ ಕಚೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಎಂ.ಸಿ.ಎಂ.ಸಿ ಸಮಿತಿ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶುಭ ಕಲ್ಯಾಣ್ ಅವರು ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ತರಬೇತಿಯಲ್ಲಿ ರಾಜಕೀಯ ಜಾಹೀರಾತುಗಳ ಪ್ರೀ ಸರ್ಟಿಫಿಕೇಷನ್, ಪೇಯ್ಡ್ ನ್ಯೂಸ್, ಫೇಕ್ ನ್ಯೂಸ್, ಸಾಮಾಜಿಕ ಜಾಲತಾಣಗಳ ನಿಗಾವಣೆ, ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ ನಿಗಾವಣೆ ಕುರಿತಂತೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತುಗಳಿಗೆ ಮುಂಚಿತವಾಗಿ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ದೃಢೀಕರಣ ಪ್ರಮಾಣಪತ್ರವನ್ನು ಪಡೆಯಬೇಕು. ಮಾಧ್ಯಮಗಳಲ್ಲಿ ಪ್ರಸಾರವಾಗುವಂತಹ ಪೇಯ್ಡ್ ನ್ಯೂಸ್(ಕಾಸಿಗಾಗಿ ಸುದ್ದಿ) ಪ್ರಕರಣಗಳನ್ನು ಎಂಸಿಎಂಸಿ ಸಮಿತಿಯು ಪರಿಶೀಲಿಸಬೇಕು ಮತ್ತು ಸಾಧ್ಯವಾದಷ್ಟು ಆಯಾ ದಿನವೇ ನಿರ್ಣಯ ಕೈಗೊಳ್ಳಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಡಿಐಪಿಆರ್‌ ದರಪಟ್ಟಿ ಅನ್ವಯಿಸಬೇಕು ಎಂದು ತಿಳಿಸಲಾಯಿತು.

ಯಾವುದೇ ರಾಜಕೀಯ ಅಭ್ಯರ್ಥಿಯ ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಗಳು, ಅಭ್ಯರ್ಥಿಯ ಪರ ಅಥವಾ ವಿರುದ್ಧವಾಗಿ ರಾಜಕೀಯ ಜಾಹೀರಾತು ಪ್ರಕಟಿಸಿದಲ್ಲಿ ಅಂತಹ ವ್ಯಕ್ತಿಯ ವಿರುದ್ಧ ಸೆಕ್ಷನ್ ೧೭೧ಹೆಚ್ ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು. ಒಂದೊಮ್ಮೆ ಅಂತಹ ಖಾಸಗಿ ವ್ಯಕ್ತಿ ಅಭ್ಯರ್ಥಿಯ ಗಮನಕ್ಕೆ ತಂದು ಜಾಹೀರಾತು ಪ್ರಕಟಿಸದಲ್ಲಿ, ಇದನ್ನು ಅಭ್ಯರ್ಥಿ ಒಪ್ಪಿಕೊಂಡಲ್ಲಿ ಅಭ್ಯರ್ಥಿಯ ವೆಚ್ಚಕ್ಕೆ ಜಾಹೀರಾತು ವೆಚ್ಚವನ್ನು ಸೇರಿಸಬೇಕೆಂದು ಸೂಚಿಸಲಾಯಿತು.

ಮತದಾನ ನಡೆಯುವ 48 ಗಂಟೆಗಳ ಮುನ್ನ ಜಾಹೀರಾತು ಪ್ರಕಟಿಸಬೇಕೆಂದಿದ್ದಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಮುಂಚಿತವಾಗಿಯೇ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪ್ರಮಾಣ ಪತ್ರ ಪಡೆಯಬೇಕು ಎಂದು ತಿಳಿಸಲಾಯಿತು.

ಪಾಂಪ್ಲೆಟ್, ಬ್ರೋಷರ್‌, ಹ್ಯಾಂಡ್‌ಬಿಲ್ ಮುಂತಾದ ಚುನಾವಣಾ ಸಂಬಂಧಿತ ಕರಪತ್ರಗಳನ್ನು ಮುದ್ರಿಸುವ ಮುದ್ರಕರು ಸಂಪೂರ್ಣವಾಗಿ ತಮ್ಮ ವಿಳಾಸ, ಮುದ್ರಿತ ಕರಪತ್ರಗಳ ಸಂಖ್ಯೆ, ಕರಪತ್ರಗಳಲ್ಲಿನ ಅಂಶ ಮತ್ತು ಯಾವ ರೀತಿಯಾಗಿ ಮುದ್ರಣವೆಚ್ಚ ಪಾವತಿಸಲಾಗಿದೆ ಎಂಬುದರ ಮಾಹಿತಿಯನ್ನು ಜಿಲ್ಲಾ ಎಂಸಿಎಂಸಿ ಸಮಿತಿಗೆ ತಿಳಿಸಬೇಕು ಎಂಬುದನ್ನು ಸೂಚಿಸಲಾಯಿತು.