ಮತ್ತೊಂದು ದಾಖಲೆ ನಿರ್ಮಿಸಲು ತುಮಕೂರು ತಯಾರಿ

| Published : Feb 06 2024, 01:30 AM IST

ಸಾರಾಂಶ

‘ನಮ್ಮ ಸಂವಿಧಾನ’ ಕನ್ನಡ ಪದದ ಆಕೃತಿ ರಚಿಸಲು ಮೊದಲಿಗೆ ಕ್ಯಾಡ್ ವಿನ್ಯಾಸದಲ್ಲಿ ತಯಾರಿಸಿ 270 x 40 ಅಡಿ ಅಳತೆಯಲ್ಲಿ ಬಾಟಲಿಗಳನ್ನು ಜೋಡಿಸಲಾಗಿದ್ದು, ಗಿನ್ನಿಸ್ ದಾಖಲೆ ನಿರ್ಮಿಸಲು ಪ್ರಯತ್ನಿಸಲಾಗಿದೆ.

ಬಾಟಲಿಗಳಲ್ಲಿ ಮೂಡಿದ ‘ನಮ್ಮ ಸಂವಿಧಾನ’ ಕನ್ನಡ ಪದದ ಆಕೃತಿ । ಗಿನ್ನಿಸ್ ದಾಖಲೆ ನಿರ್ಮಿಸಲು ಪ್ರಯತ್ನ: ಡಿಸಿ ಶುಭ ಕಲ್ಯಾಣ್

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಪ್ರಯುಕ್ತ 1,35,000 ಏಕ ಬಳಕೆಯ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ‘ನಮ್ಮ ಸಂವಿಧಾನ’ ಎಂಬ ಕನ್ನಡ ಪದದ ವಿಶೇಷ ಆಕೃತಿಯನ್ನು ರಚಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ತುಮಕೂರು ಜಿಲ್ಲಾಡಳಿತ ವಿನೂತನ ಹೆಜ್ಜೆ ಇರಿಸಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಜನವರಿ 26 ರಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವದ ಅರಿವು ಮೂಡಿಸಲು ಈ ಕನ್ನಡ ಪದಗಳ ವಿಶೇಷ ಆಕೃತಿ ಜೋಡಿಸುವ ಪ್ರಯತ್ನ ಮಾಡಲಾಗಿದೆ. ಸುಮಾರು 305 ವಿದ್ಯಾರ್ಥಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಸೇರಿ ಫೆಬ್ರವರಿ 4 ರಂದು ಬೆಳಿಗ್ಗೆ 11 ರಿಂದ ರಾತ್ರಿ 7.30 ರವರೆಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಜೋಡಿಸಿ ವಿಶೇಷ ಆಕೃತಿ ಅರಳಿಸಿದ್ದಾರೆ ಎಂದು ತಿಳಿಸಿದರು.

‘ನಮ್ಮ ಸಂವಿಧಾನ’ ಕನ್ನಡ ಪದದ ಆಕೃತಿ ರಚಿಸಲು ಮೊದಲಿಗೆ ಕ್ಯಾಡ್ ವಿನ್ಯಾಸದಲ್ಲಿ ತಯಾರಿಸಿ 270 x 40 ಅಡಿ ಅಳತೆಯಲ್ಲಿ ಬಾಟಲಿಗಳನ್ನು ಜೋಡಿಸಲಾಗಿದ್ದು, ಗಿನ್ನಿಸ್ ದಾಖಲೆ ನಿರ್ಮಿಸಲು ಪ್ರಯತ್ನಿಸಲಾಗಿದೆ. ಈ ಪ್ರಯತ್ನಕ್ಕೆ ಶ್ರಮಿಸಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಅಭಿನಂದನೆ ತಿಳಿಸಿದರು.

ನಂತರ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಪ್ರತಿ ಪಂಚಾಯತಿಯಲ್ಲಿಯೂ ಜಾಥಾ ಕಾರ್ಯಕ್ರಮದ ಸ್ತಬ್ಧಚಿತ್ರ ವಾಹನವನ್ನು ಪೂರ್ಣ ಕುಂಭಗಳಿಂದ ಬರಮಾಡಿಕೊಂಡು ಸಂವಿಧಾನ ರಚನೆಗೆ ಡಾ. ಅಂಬೇಡ್ಕರ್ ರ ಶ್ರಮವನ್ನು ಸ್ಮರಿಸುತ್ತಾ ಗೌರವದಿಂದ ಮುಂದಿನ ಗ್ರಾಮ ಪಂಚಾಯತಿಗೆ ಬೀಳ್ಕೊಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳೂ ಕೂಡ ಭಾಗಿಯಾಗುತ್ತಿದ್ದಾರೆ. ಜನರಿಂದಲೂ ಸಹ ಉತ್ತಮವಾದ ಸ್ಪಂದನೆ ದೊರೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಹಬಾಳ್ವೆಯ ಸಂದೇಶ ಹೊತ್ತು ತರುವ ಈ ಜಾಥಾ ಕಾರ್ಯಕ್ರಮದಲ್ಲಿ ಪ್ರತಿ ಭಾರತೀಯರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಈ ವಿನೂತನ ಪ್ರಯತ್ನದ ಬಗ್ಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರುಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಸೃಜನಶೀಲವಾಗಿ ಏರ್ಪಡಿಸಲು ತುಮಕೂರು ಜಿಲ್ಲೆಯನ್ನು ಮಾದರಿಯಾಗಿಟ್ಟುಕೊಳ್ಳಬೇಕೆಂದು ಇತರೆ ಜಿಲ್ಲೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ‘ನಮ್ಮ ಸಂವಿಧಾನ’ಎಂಬ ಕನ್ನಡ ಪದದ ವಿಶೇಷ ಆಕೃತಿಗೆ ಶಾಲಾ ಮಕ್ಕಳು ಗೌರವ ಸಮರ್ಪಿಸಿದರು. ನಗರದ ಸಿದ್ಧಗಂಗಾ ಪ್ರೌಢಶಾಲೆ, ಸಿದ್ಧಗಂಗಾ ಎಲಿಮೆಂಟರಿ ಶಾಲೆ, ಚೇತನ ವಿದ್ಯಾಮಂದಿರ, ಸಿಲ್ವರ್ ಜ್ಯೂಬಿಲಿ ಶಾಲೆ, ವಿವೇಕಾನಂದ ಶಾಲೆ, ಕಾರ್ಮೆಲ್ ಶಾಲೆ, ಚೈತನ್ಯ ಟೆಕ್ನೋ, ಸುಮತಿ ಶಾಲೆ, ಸೀತಾ ಪ್ರೌಢಶಾಲೆ, ಬಿ.ಎ.ಗುಡಿಪಾಳ್ಯ ಹಾಗೂ ಹನುಮಂತಪುರದ ಸರ್ಕಾರಿ ಶಾಲೆಗಳ ಸುಮಾರು 2000 ವಿದ್ಯಾರ್ಥಿಗಳು ನಮ್ಮ ಸಂವಿಧಾನ ಆಕೃತಿ ಸುತ್ತಲೂ ಸರಣಿಯಲ್ಲಿ ನಿಂತು ಗೌರವ ಸಲ್ಲಿಸಿ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾದರು. ದ್ರೋಣ್ ಕ್ಯಾಮೆರಾದಲ್ಲಿ ‘ನಮ್ಮ ಸಂವಿಧಾನ’ ವಿಶೇಷ ಆಕೃತಿಯನ್ನು ಸೆರೆ ಹಿಡಿಯಲಾಯಿತು.

--------