ತುಮಕೂರು ರನ್ನರ್ ಕ್ಲಬ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತುಮಕೂರು ಮ್ಯಾರಥಾನ್-2 ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಐದು ಕಿ.ಮಿ.ವಿಭಾಗದಲ್ಲಿ ಶ್ರಾವಂತಗೌಡ, ಮಹಾದೇವಿ, 10 ಕಿ.ಮಿ.ವಿಭಾಗದಲ್ಲಿ ರಾಜಶೇಖರಯ್ಯ ದೊಡ್ಡಯ್ಯ, ಸೈಯದ್ ಆಲಿಯಾ ಷೇಕ್, 21 ಕಿ.ಮಿ.ವಿಭಾಗದಲ್ಲಿ ಎಂ.ವೈ.ಸಂದೀಪಕುಮಾರ್, ಮಮತ್ ರವಾತ್ ಅವರು ಚಾಂಪಿಯನ್ ಆಗಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ರನ್ನರ್ ಕ್ಲಬ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತುಮಕೂರು ಮ್ಯಾರಥಾನ್-2 ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಐದು ಕಿ.ಮಿ.ವಿಭಾಗದಲ್ಲಿ ಶ್ರಾವಂತಗೌಡ, ಮಹಾದೇವಿ, 10 ಕಿ.ಮಿ.ವಿಭಾಗದಲ್ಲಿ ರಾಜಶೇಖರಯ್ಯ ದೊಡ್ಡಯ್ಯ, ಸೈಯದ್ ಆಲಿಯಾ ಷೇಕ್, 21 ಕಿ.ಮಿ.ವಿಭಾಗದಲ್ಲಿ ಎಂ.ವೈ.ಸಂದೀಪಕುಮಾರ್, ಮಮತ್ ರವಾತ್ ಅವರು ಚಾಂಪಿಯನ್ ಆಗಿದ್ದಾರೆ.ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆರಂಭಗೊಂಡ ತುಮಕೂರು ಮ್ಯಾರಥಾನ್-2 ಹನುಮಂತಪುರದ ಮೂಲಕ ಬೆಳಗುಂಬ, ಬೆಳಗುಂಬ ಕ್ರಾಸ್, ವಡ್ಡರಹಳ್ಳಿ,ಸ್ವಾಂದೇನಹಳ್ಳಿ, ಅಜ್ಜಪ್ಪನಹಳ್ಳಿ ತಲುಪಿ, ಆದೇ ದಾರಿಯಲ್ಲಿ ವಾಪಸ್ಸಾಗುವ ಐದು, ಹತ್ತು ಮತ್ತು 21 ಕಿ.ಮಿ. ಗಳ ಮ್ಯಾರಥಾನ್ ಆಯೋಜಿಸಿದ್ದು, ಒಟ್ಟು 2500 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದ ಓಟದ ಐದು ಕಿ.ಮಿ.ಪುರುಷರ ವಿಭಾಗದಲ್ಲಿ ಶ್ರಾವಂತಗೌಡ ಪ್ರಥಮ, ಕೌಶಿಕ್ ದ್ವಿತಿಯ ಮತ್ತು ಯೋಗೀಶ್ ದೇವಾಡಿಗ ತೃತೀಯ ಬಹುಮಾನ ಪಡೆದರೆ ಮಹಿಳೆಯರ ವಿಭಾಗದಲ್ಲಿ ಮಹಾದೇವಿ, ಭೀಮಾಬಾಯಿ, ಪುಣ್ಯ ಇವರುಗಳು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.
ಹತ್ತು ಕಿ.ಮಿಗಳ ಪುರುಷ ವಿಭಾಗದಲ್ಲಿ ರಾಜಶೇಖರ ದೊಡ್ಡಯ್ಯ ಪ್ರಥಮ, ಸುನಿಲ್ ಕರಿಯಪ್ಪ ದ್ವಿತೀಯ ಹಾಗೂ ಸಿದ್ದರಾಜು.ಸಿ. ತೃತೀಯ ಬಹುಮಾನ ಪಡೆದರೆ,ಮಹಿಳೆಯರಲ್ಲಿ ಸೈಯದ್ ಆಲಿಯಾ ಷೇಕ್, ರಂಜಿತ,ಸೌಮ್ಯ ಎಸ್.ಯು ಮೊದಲ ಮೂರು ಸ್ಥಾನಗಳನ್ನು ಪಡೆದರು. 21 ಕಿ.ಮಿ. ಪುರುಷರ ವಿಭಾಗದಲ್ಲಿ ಎಂ.ವೈ.ಸಂದೀಪ್ ಕುಮಾರ್, ಗೌತಮ.ಎಸ್, ಬಾಲಾಜಿ.ಕೆ.ಜಿ. ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಮಮತ್ ರಾವತ್, ಅನುರಾಧ.ಎಚ್.ಕೆ, ವೈಶಾಲಿ.ಕುಲಕರ್ಣಿ ಮೊದಲ ಮೂರು ಸ್ಥಾನ ಪಡೆದರು. ಮೂರು ವಿಭಾಗಗಳ ಮೊದಲ ಮೂರು ಸ್ಥಾನ ಪಡೆದ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಟ್ರೋಫಿಯ ಜೊತೆಗೆ, ಐವತ್ತು ಸಾವಿರ ರೂಗಳ ಬಹುಮಾನವನ್ನು ಹಂಚಲಾಯಿತು.ತುಮಕೂರು ಮ್ಯಾರಥಾನ್-2ನಲ್ಲಿ ವಿಚೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ತುಮಕೂರು ರನ್ನರ್ ಕ್ಲಬ್ ಟ್ರಸ್ಟ್ ಕಾರ್ಯದರ್ಶಿ ಡಾ.ರವಿ, ಕರ್ನಾಟಕವಲ್ಲದೆ ದೇಶದ ವಿವಿಧ ಭಾಗಗಳ ಸುಮಾರು 2400 ಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡಿದ್ದು, ಡ್ರಗ್ಸ್ ಮುಕ್ತ ಯುವಜನತೆ ಎಂಬ ಮಹತ್ವದ ಉದ್ದೇಶದೊಂದಿಗೆ ಈ ಮ್ಯಾರಥಾನ್ ಆಯೋಜಿಸಲಾಗಿದೆ. ಹಲವಾರು ದಾನಿಗಳು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಯಾವುದೇ ತೊಂದರೆಗಳಿಲ್ಲದೆ ಓಟ ಮುಕ್ತಾಯಗೊಂಡಿರುವುದು ಸಂತಸ ತಂದಿದೆ. ಯುವಜನತೆ ಕ್ರೀಡೆಗಳತ್ತ ಹೊರಳಬೇಕು ಎಂಬ ಮಹಾತ್ವಕಾಂಕ್ಷೆ ನಮ್ಮದಾಗಿದೆ.ಈ ನಿಟ್ಟಿನಲ್ಲಿ ತುಮಕೂರು ಮ್ಯಾರಥಾನ್-2 ಯಶಸ್ವಿಯಾಗಿದೆ.ಓಟಗಾರರನ್ನು ಹುರಿದುಂಬಿಸುವ ಸಲುವಾಗಿ ಸ್ಥಳೀಯ ಜಾನಪದ ಕಲಾವಿದರನ್ನು ಬಳಸಿಕೊಳ್ಳಲಾಗಿದೆ ಎಂದರು.
ತುಮಕೂರು ರನ್ನರ್ ಕ್ಲಬ್ ಟ್ರಸ್ಟ್ ನ ಸತೀಶ್ ಮಲ್ಲಣ್ಣ ಮಾತನಾಡಿ, ಕರ್ನಾಟಕವಲ್ಲದೆ ಭಾರತವನ್ನೇ ಡ್ರಗ್ಸ್ ಮುಕ್ತ ಮಾಡಬೇಕೆಂಬ ಘನ ಉದ್ದೇಶ ಈ ಮ್ಯಾರಥಾನ್ ಓಟದ್ದಾಗಿದೆ. ಚಿಕ್ಕಮಕ್ಕಳಿಂದ ವಯೋವೃದ್ದರವರೆಗೆ ಈ ಓಟದಲ್ಲಿ ಪಾಲ್ಗೊಂಡಿದ್ದಾರೆ. ಭಾಗವಹಿಸಿದ್ದ ಎಲ್ಲಾ ಓಟಗಾರರಿಗೆ ಟೀ ಶರ್ಟ್ ಜೊತೆಗೆ, ತುಮಕೂರು ಜಿಲ್ಲೆಯ ಕುರುಹುಗಳನ್ನು ಒಳಗೊಂಡ ಒಂದು ಪದಕವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹುಮ್ಮಸ್ಸಿನಿಂದ ಕಾರ್ಯಕ್ರಮ ಆಯೋಜಿಸಲು ಶಕ್ತಿ ತುಂಬಿದೆ ಎಂದರು.ಈ ವೇಳೆ ವಿದ್ಯಾವಾಹಿನಿ ಸಂಸ್ಥೆಯ ಪ್ರದೀಪಕುಮಾರ್,ಕ್ರೀಡಾಪ್ರೋತ್ಸಾಹಕರಾದ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
