ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕೇಂದ್ರ ಸರ್ಕಾರ ಕೂಡಲೇ ಖಾದ್ಯತೈಲ ಅಮದು ನಿಯಂತ್ರಿಸಿ, ರಾಜ್ಯದ ಕೊಬ್ಬರಿ ಬೆಳೆಗಾರರನ್ನು ರಕ್ಷಿಸಬೇಕೆಂದು ಕರ್ನಾಟಕ ಪ್ರಾಂತರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಖಾದ್ಯತೈಲ ಅಮದು ಸುಂಕ ವಿನಾಯಿತಿಯನ್ನು 31 ಮಾರ್ಚ್ 2025 ರ ತನಕ ವಿಸ್ತರಿಸಿದೆ. ಭಾರೀ ಪ್ರಮಾಣದ ಹಾಗೂ ದೀರ್ಘಕಾಲದ ವರೆಗಿನ ಸುಂಕ ಕಡಿತದ ಪ್ರೋತ್ಸಾಹದಿಂದ ದಾಖಲೆ ಪ್ರಮಾಣದಲ್ಲಿ ಕಚ್ಚಾ ಹಾಗೂ ಸಂಸ್ಕರಿತ ಖಾದ್ಯ ತೈಲ ದೇಶಕ್ಕೆಅಮದಾಗುತ್ತಿದೆ.
ಇದರಿಂದಾಗಿ ರಾಜ್ಯದ ರೈತರ ಕೊಬ್ಬರಿಯ ಬೆಲೆ ಕುಸಿತ ಮುಂದುವರೆದಿದೆ. ಈ ತಪ್ಪು ನೀತಿಯನ್ನು ಮರೆ ಮಾಚಿ ರೈತರನ್ನು, ಬಿಜೆಪಿ ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.
ಈ ವರ್ಷಕ್ಕೆ ರಾಜ್ಯದಲ್ಲಿ ಖರೀದಿ ಮಾಡುವ ಮಿತಿಯನ್ನು 62500 ಕ್ವಿಂಟಲ್‌ಗೆ ಕೇಂದ್ರ ಸರ್ಕಾರ ನಿಗದಿ ಮಾಡಿತ್ತು. ಕೇವಲ ನಾಲ್ಕೇ ದಿನದಲ್ಲಿ ಈ ಗುರಿ ಮುಟ್ಟಿರುವುದರಿಂದ ನಪೇಡ್ ಖರೀದಿ ಪ್ರಕ್ರಿಯೆಯನ್ನು ನಿಲ್ಲಿಸಿದೆ.
ಈ ತಕ್ಷಣವೇ ಸ್ಥಗಿತಗೊಂಡಿರುವ ನಪೇಡ್ ಖರೀದಿ ನೋಂದಣಿಯನ್ನು ಪುನರ್ ಆರಂಭಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ವರ್ಷ ಪೂರ್ತಿ ಖರೀದಿ ಕೇಂದ್ರ ಚಾಲ್ತಿಯಲ್ಲಿ ಇರಬೇಕು, ರಾಜ್ಯದಲ್ಲಿ ಉತ್ಪಾದನೆ ಆಗಿರುವ ರೈತರ ಎಲ್ಲಾ ಕೊಬ್ಬರಿಯನ್ನು ಖರೀದಿ ಮಾಡಬೇಕು. ಕೇಂದ್ರ ಸರ್ಕಾರ ಹಾಗೂ ನಫೆಡ್ ಮೇಲೆ ಖರೀದಿ ಒತ್ತಡ ಕಡಿಮೆ ಮಾಡಬೇಕಾದರೆ ತಾಳೆ, ಸೂರ್ಯಕಾಂತಿ ಮುಂತಾದ ಖಾದ್ಯ ತೈಲ ಅಮದನ್ನು ನಿಯಂತ್ರಿಸಬೇಕು ಎಂದಿದೆ.
ರೈತ ವಿರೋಧಿ ಕೇಂದ್ರ ಬಜೆಟ್ ಖಂಡಿಸಿ ಫೆಬ್ರವರಿ 16 ರಂದು ರಾಜ್ಯಾದ್ಯಂತ ಎಲ್ಲಾ ತಾಲೂಕು/ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ರೈತ-ಕಾರ್ಮಿಕರ ಪ್ರತಿಭಟನೆ ನಡೆಸಲಾಗುವುದು ಎಂದರು.
ಸತತ ಹತ್ತು ವರ್ಷಗಳ ಕಾರ್ಪೊರೇಟ್ ಪರವಾದ ನೀತಿಗಳಿಂದ ಹಾಗೂ ಕೋವಿಡ್ ಜಾಗತಿಕ ಪಿಡುಗು, ಆರ್ಥಿಕ ಬಿಕ್ಕಟ್ಟು ಗಳಿಂದ ನೊಂದು ಬಸವಳಿದಿರುವ ಜನರಿಗೆ ಯಾವುದೇ ಪರಿಹಾರ ಒದಗಿಸಲು ಈ ಬಜೆಟ್ ವಿಫಲವಾಗಿದೆ.
ಈಗಾಗಲೇ ಹಿಂದೆಂದೂ ಕಾಣದ ನಿರುದ್ಯೋಗ, ಬೆಲೆ ಏರಿಕೆ -ಹಣದುಬ್ಬರ ದಿಂದ ಜೀವನದ ಕನಿಷ್ಠ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿರುವ ಜನರಲ್ಲಿ ಆತ್ಮ ವಿಶ್ವಾಸ ತುಂಬುವ ಬದಲು ವಾಸ್ತವಿಕ ಜನರ ಬದುಕನ್ನು ಕ್ರೂರ ತಮಾಷೆಗೆ ಒಳಪಡಿಸಿದೆ ಎಂದು ಕರ್ನಾಟಕ ಪ್ರಾಂತರೈತ ಸಂಘ ಕಟುವಾಗಿ ಟೀಕಿಸಿದೆ..
ನಕಲಿಕಥನ ಸುಳ್ಳುಗಳ ಹಾಗೂ ದಾರಿತಪ್ಪಿಸುವ ಅಂಕಿ ಅಂಶಗಳ ಬಜೆಟ್ ಭಾಷಣದಲ್ಲಿ ಸತತವಾಗಿ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯ ವಾಸ್ತವವನ್ನು ಮರೆ ಮಾಚಲಾಗಿದೆ.
ಕಳೆದ ಐದು ವರ್ಷಗಳಲ್ಲೇ 2023-24 ರ ವರ್ಷದಲ್ಲಿ ಕೃಷಿ ರಂಗಕ್ಕೆ ಅತಿಕಡಿಮೆ ವೆಚ್ಚ ಮಾಡಲಾಗಿದೆ. ಈ ಹಿಂದಿನ ವರ್ಷಕ್ಕೆ ಮಾಡಲಾದ ವೆಚ್ಚದಲ್ಲಿ ಶೇ. 22.3ರಷ್ಟು ಇಳಿಕೆ ಯಾಗಿದ್ದನ್ನು 2024-25 ಕ್ಕೂ ಮತ್ತಷ್ಟು ವೆಚ್ಚ ಇಳಿಕೆಯ ಕ್ರಮವನ್ನೇ ಮುಂದುವರೆಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ, ಜಿಲ್ಲಾ ಅಧ್ಯಕ್ಷ ಆರ್.ಎಸ್. ಚನ್ನಬಸವಣ್ಣ, ಉಪಾದ್ಯಕ್ಷ ಬಿ. ಉಮೇಶ, ದೊಡ್ಡನಂಜಯ್ಯ, ಸಹ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ, ರಾಜಮ್ಮ ಉಪಸ್ಥಿತರಿದ್ದರು.
;Resize=(128,128))
;Resize=(128,128))