ಸಾರಾಂಶ
ತುಮಕೂರು: ತುಮಕೂರು ವಿವಿಯ ಸಹಭಾಗಿತ್ವದಲ್ಲಿ ಆರಂಭವಾಗುತ್ತಿರುವ ಆವಿಷ್ಕಾರ ಮತ್ತು ತರಬೇತಿ ಕೇಂದ್ರವು ಎರಡೂ ವಿಶ್ವವಿದ್ಯಾನಿಲಯಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಲ್ಲಿ ಮಹತ್ವ ಪಾತ್ರ ವಹಿಸಲಿದೆ ಎಂದು ಇಂಗ್ಲೆಂಡ್ ಸೌತ್ ವೇಲ್ಸ್ ವಿವಿ ಯ ತರಬೇತಿ ವ್ಯವಸ್ಥಾಪಕ ರಿಚಿಟರ್ನರ್ ಅಭಿಪ್ರಾಯಪಟ್ಟರು.
ತುಮಕೂರು ವಿವಿ ಮತ್ತು ಇಂಗ್ಲೆಂಡ್ ಸೌತ್ ವೇಲ್ಸ್ ವಿವಿಯು ಸೋಮವಾರ ಆಯೋಜಿಸಿದ್ದ ‘ಆವಿಷ್ಕಾರ, ತರಬೇತಿ ಹಾಗೂ ಉದ್ಯಮಶೀಲತೆಗಾಗಿ ಸಹಭಾಗಿತ್ವ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.ಸಂಶೋಧನೆ ಆಧಾರಿತ ಅಧ್ಯಯನಗಳಿಂದ ಆವಿಷ್ಕಾರಗಳು ಸಾಧ್ಯವಾಗುತ್ತವೆ. ಪ್ರಾಧ್ಯಾಪಕರಿಗೆ-ವಿದ್ಯಾರ್ಥಿಗಳಿಗೆ ಸಂಶೋಧನೆಯ ಮಹತ್ವ ತಿಳಿಸುವುದೇ ಈ ಸಹಭಾಗಿತ್ವದ ಮುಖ್ಯಉದ್ದೇಶ. ಅಧ್ಯಯನ, ಸಂಶೋಧನೆಯೊಂದಿಗೆ ತಂತ್ರಜ್ಞಾನದ ಬಳಕೆಯಾದರೆ ಆವಿಷ್ಕಾರಕ್ಕೆ ಪುಷ್ಟಿ ಸಿಗಲಿದೆ ಎಂದರು.
ತುಮಕೂರಿನ ಇನ್ನೋವೇಶನ್, ಇನ್ಕ್ಯುಬೇಷನ್ ಮತ್ತು ವಾಣಿಜ್ಯೋದ್ಯಮ ಸಲಹಾ ಮಂಡಳಿಯ ಅಧ್ಯಕ್ಷ ಎಚ್. ಜಿ. ಚಂದ್ರಶೇಖರ್ ಮಾತನಾಡಿ, ಅವಶ್ಯಕತೆಯು ಆವಿಷ್ಕಾರಗಳ ತಾಯಿ. ವಿದ್ಯಾರ್ಥಿಗಳ ಉತ್ತಮ ಆಲೋಚನೆಗಳಿಂದ ಆವಿಷ್ಕಾರಗಳು ಸಾಧ್ಯ ಎಂದರು.ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಅಟಲ್ ತರಬೇತಿ ಕೇಂದ್ರ, ಅನಂತಪುರ ಮತ್ತು ಸೌತ್ ವೇಲ್ಸ್ ವಿಶ್ವವಿದ್ಯಾನಿಲಯವು ತುಮಕೂರಿನಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಲು ಉತ್ತಮ ಬೆಂಬಲವನ್ನು ನೀಡಿದೆ. ಕೆಲವೇ ದಿನಗಳಲ್ಲಿ ವಿವಿಯು ಅಧ್ಯಯನ, ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಎಲ್ಲ ಸಿದ್ಧತೆಗಳನ್ನು ನಡೆಸಿದೆ ಎಂದು ತಿಳಿಸಿದರು.
‘ಆವಿಷ್ಕಾರ, ತರಬೇತಿ ಹಾಗೂ ಉದ್ಯಮಶೀಲತೆಗಾಗಿ ಸಹಭಾಗಿತ್ವ’ ಕೇಂದ್ರದ ಆರಂಭಕ್ಕೆ ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮತ್ತು ಇಂಗ್ಲೆಂಡ್ ಸೌತ್ ವೇಲ್ಸ್ ವಿವಿಯ ತರಬೇತಿ ವ್ಯವಸ್ಥಾಪಕ ರಿಚಿಟರ್ನರ್ ಸಹಿ ಹಾಕಿದರು.ಕೈಗಾರಿಕೋದ್ಯಮಿ ಆರ್. ಸುರೇಂದ್ರ ಶಾ, ಉದ್ಯಮಿ ಅಕ್ಷತಾ ಅಯ್ಯಂಗಾರ್, ತುಮಕೂರಿನ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಚ್.ಗಿರೀಶ್ ಉಪಸ್ಥಿತರಿದ್ದರು.