ಸಾರಾಂಶ
ಚಳ್ಳಕೆರೆ ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ:
ತಾಲೂಕಿನಾದ್ಯಂತ ನಿರಂತರವಾಗಿ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಸಮೃದ್ಧವಾಗಿ ಸಿಗಬೇಕೆಂಬ ದೃಷ್ಟಿಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮದ ಪ್ರತಿಮನೆಗೂ ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆ ಪ್ರಗತಿಯಲ್ಲಿದೆ. ಜನವರಿ ಅಂತ್ಯದೊಳಗೆ ಜನರಿಗೆ ಈ ಯೋಜನೆಯಿಂದ ಸಮೃದ್ಧವಾಗಿ ನೀರು ದೊರಕಲಿದೆ ಎಂದು ತಾಪಂ ಆಡಳಿತಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಟಿ.ಮಂಜುನಾಥ ತಿಳಿಸಿದರು.ಗುರುವಾರ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದರು. ಪ್ರತಿಯೊಂದು ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಜಾಗ್ರತೆ ವಹಿಸಬೇಕಿದೆ. ವಿಶೇಷವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ವಿಶೇಷ ಗಮನಹರಿಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳ ಅನುಷ್ಠಾಕ್ಕೆ ಬಿಡುಗಡೆಯಾಗುವ ಹಣ ಪೂರ್ಣಪ್ರಮಾಣದಲ್ಲಿ ಸದ್ವಿನಿಯೋಗಬೇಕು ಎಂದು ತಿಳಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ ಮಾತನಾಡಿ, ತಾಲೂಕಿನಾದ್ಯಂತ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲಿದೆ. ಯಾವುದೇ ಯೋಜನೆ ಅನುಷ್ಠಾನವಾಗಲಿ ಅದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವಂತಾಗಬೇಕು ಎಂದರು.ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜೆ.ಅಶೋಕ್, ತೋಟಗಾರಿಕೆ ಅಧಿಕಾರಿ ವಿರೂಕ್ಷಪ್ಪ, ಪಶು ಇಲಾಖೆ ಅಧಿಕಾರಿ ಡಾ.ರೇವಣ್ಣ, ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಶಿವರಾಜ್, ಕಾರ್ಮಿಕ ಅಧಿಕಾರಿ ಕುಸುಮಾ, ಸಿಡಿಪಿಒ ಹರಿಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.