ಸಾರಾಂಶ
- ತುಂಗಾ ಮೇಲ್ದಂಡೆ ನಾಲೆ ಒಡೆದ ಸ್ಥಳ ಪರಿಶೀಲಿಸಿ ನ್ಯಾಮತಿ ತಹಸೀಲ್ದಾರ್ ಹೇಳಿಕೆ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ
ನ್ಯಾಮತಿ ತಾಲೂಕು ವ್ಯಾಪ್ತಿಗೆ ಬರುವ ತುಂಗಾ ಮೇಲ್ದಂಡೆ ನಾಲೆ ಭಾನುವಾರ ಒಡೆದ ಸುದ್ದಿ ತಿಳಿದು ಸ್ಥಳಕ್ಕೆ ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.ನಾಲೆ ಒಡೆದ ಹಿನ್ನೆಲೆ ಗಾಜನೂರು ಬಳಿ ತುಂಗಾ ಡ್ಯಾಂ ಗೇಟ್ ಬಂದ್ ಮಾಡಲಾಗಿದೆ. ಹೊಳಲೂರು, ಗಂಗನಕೋಟಿ ಪ್ರದೇಶಗಳಲ್ಲಿ ನಾಲೆ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸುವ ಮೂಲಕ ಹಾಗೂ ಸಬ್ ಚಾನಲ್‌ಗಳಿಗೆ ನೀರು ತಿರುಗಿಸಲಾಗಿದೆ. ಇದರಿಂದ ಬಸವನಹಳ್ಳಿ ಸಮೀಪದ ಒಡೆದುಹೋಗಿರುವ ನಾಲೆಗೆ ನೀರು ಹರಿಯದಂತೆ ಕ್ರಮ ಕೈಕೊಳ್ಳಲಾಗಿದೆ. ಭಾನುವಾರ ರಾತ್ರಿ ವೇಳೆಗೆ ಒಡೆದು ಹೋಗಿರುವ ನಾಲಾಗೆ ನೀರು ಹರಿದುಬರುವ ಪ್ರಮಾಣ ಕಡಿಮೆಯಾಗುವುದು. ಮುಂದಿನ ವಾರದೊಳಗೆ ಒಡೆದು ಹೋಗಿರುವ ನಾಲೆಯನ್ನು ತ್ವರತಗತಿಯಲ್ಲಿ ದುರಸ್ತಿಗೊಳಿಸಲಾಗುವುದು ಎಂದೂ ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ ತಿಳಿಸಿದರು.
ಶಾಸಕರ ಭೇಟಿ:ಸುದ್ದಿ ತಿಳಿದ ಶಾಸಕ ಡಿ.ಜಿ.ಶಾಂತನಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅನಂತರ ಮಾತನಾಡಿದ ಅವರು, ನಾಲೆ ಒಡೆದಿರುವುದು ದುರಾದೃಷ್ಟಕರ. ಈ ಬಾರಿ ಉತ್ತಮ ಮಳೆ ಆಗಿರುವ ಕಾರಣ ನಾಲೆ ರಿಪೇರಿ ಆಗುವವರೆಗೆ ಬೆಳೆಗಳಿಗೆ ನೀರಿನ ತೊಂದರೆ ಆಗಲಾರದು. ನಾಲಾ ನೀರು ನುಗ್ಗಿ ಹಾಳಾಗಿರುವ ರೈತರ ಜಮೀನುಗಳ ಬೆಳೆಗಳ ಬಗ್ಗೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಅಂದಾಜನ್ನು ತಯಾರಿಸಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದೆ ಎಂದರು.
ಜೊತೆಗೆ ತುಂಗಾ ಮೇಲ್ದಂಡೆ ಯೋಜನೆಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಕೂಡಲೇ ಒಡೆದ ನಾಲೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಿಸಿ, ಉತ್ತಮ ರೀತಿಯಲ್ಲಿ ರಿಪೇರಿ ಮಾಡಬೇಕು ಎಂದು ಸೂಚನೆ ನೀಡಿದರು.ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ನಾಲಾ ನೀರು ಹರಿದು ಸಾವಿರಾರು ಎಕರೆಯಷ್ಟು ಬೆಳೆ ಹಾನಿಯಾಗಿದೆ. ಈ ಬಗ್ಗೆ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ರೈತರಿಗೆ ಪರಿಹಾರ ಒದಗಿಸಿಸಬೇಕು. ನಾಲಾ ಒಡೆದುಹೋದ ಮಾಹಿತಿಯನ್ನು ದೂರವಾಣಿ ಮೂಲಕ ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರುವುದಾಗಿ ಹೇಳಿದರು.
ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ ಮಾತನಾಡಿ, ನಾಲೆ ಒಡೆದು ನೀರು ನುಗ್ಗಿ ಬೆಳೆಗಳಿಗೆ ಹಾನಿಯಾದ ಬಗ್ಗೆ ವರದಿ ತಯಾರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭ ಬಸವನಹಳ್ಳಿ ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು, ನ್ಯಾಮತಿ ತಾಲೂಕು ಕಂದಾಯ ಇಲಾಖೆ ಸಂತೋಷ್, ಅಧಿಕಾರಿಗಳ ತಂಡದವರು ಇದ್ದರು.
- - - -25ಎಚ್.ಎಲ್.ಐ3: ಬಸನಹಳ್ಳಿ ಸಮೀಪದ ತುಂಗಾ ನಾಲೆ ಒಡೆದು ನಾಲೆಯ ನೀರು ಜಮೀನುಗಳಿಗೆ ಹರಿದುಹೋಗುತ್ತಿರುವುದು.-25ಎಚ್.ಎಲ್.ಐ3ಎ.: ತುಂಗಾ ನಾಲೆ ಒಡೆದ ಸ್ಥಳಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.-25ಎಚ್.ಎಲ್.ಐ3ಬಿ: ತುಂಗಾ ನಾಲಾ ಒಡೆದ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಭೇಟಿ ನೀಡಿ ಶೀಘ್ರ ನಾಲೆ ದುರಸ್ತಿಗೊಳಿಸಿ, ನಷ್ಟ ತಡೆಗಟ್ಟಬೇಕು, ರೈತರಿಗೆ ಕೂಡಲೇ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು. -25ಎಚ್.ಎಲ್.ಐ3ಸಿ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನಾಲೆ ಒಡೆದು ನೀರು ಹರಿಯುತ್ತಿರುದನ್ನು ಪರಿಶೀಲಿಸಿದರು.