ಸಾರಾಂಶ
ರಟ್ಟೀಹಳ್ಳಿ: ತಾಲೂಕಿನ ಸತ್ತಗಿಹಳ್ಳಿ, ಹಿರೆಮೊರ ಹಾಗೂ ಆಯ್ದ ಭಾಗಗಳಲ್ಲಿ ನೀರಾವರಿ ನಿಗಮದಿಂದ ₹5 ಕೋಟಿ ವೆಚ್ಚದ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗಳ ಜಂಗಲ್ ಕಟಾವು ಹಾಗೂ ಲೈನಿಂಗ್ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.ಗುರುವಾರ ಸಂಜೆ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರ ಆರೋಪದ ಮೇರೆಗೆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೇಲ್ನೋಟಕ್ಕೆ ಕಳಪೆಯಾಗಿರುವುದು ಸ್ಪಷ್ಟವಾಗಿದೆ. ಜಂಗಲ್ ಕಟಾವು ಮಾಡಿ ತೆರವುಗೊಳಿಸದೆ ಕಾಲುವೆಗಳಲ್ಲೆ ಬಿಡಲಾಗಿದೆ ಹಾಗೂ ಕಾಲುವೆಗಳ ಲೈನಿಂಗ್ 4 ಇಂಚು ಕಾಂಕ್ರಿಟ್ ಹಾಕುವ ಬದಲು ಕೇವಲ 1.5 ಇಂಚಿನಷ್ಟು ಕಾಂಕ್ರಿಟ್ ಹಾಕುತ್ತಿದ್ದು, ಸರ್ಕಾರದ ಹಣವನ್ನು ಸಂಪೂರ್ಣ ಲೂಟಿ ಹೊಡೆಯಲಾಗುತ್ತಿದೆ. ಆದ್ದರಿಂದ ತಕ್ಷಣ ಕಾಮಗಾರಿ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಕಳಪೆ ಕಾಮಗಾರಿಯ ಬಗ್ಗೆ ಶಿವಮೊಗ್ಗದ ಮುಖ್ಯ ಎಂಜಿನಿಯರ್ ಜತೆ ದೂರವಾಣಿ ಮೂಲಕ ಮಾತನಾಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.ಜೂನ್- ಜುಲೈ ತಿಂಗಳು ತುಂಗಾ ಮೇಲ್ದಂಡೆ ಕಾಮಗಾರಿ ನಡೆಸುವ ಸಮಯವೇ ಅಲ್ಲ. ಜು. 20ರಂದು ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. 15- 20 ದಿನಗಳಲ್ಲಿ ₹5 ಕೋಟಿ ವೆಚ್ಚದ ಕಾಮಗಾರಿಯನ್ನು ತಮಗಿಷ್ಟ ಬಂದಂತೆ ಮುಗಿಸಿ ಸಾರ್ವಜನಿಕರ ಹಣ ಲೂಟಿ ಹೊಡೆಯಲು ಸಂಚು ರೂಪಿಸಿದ್ದು, ಅದಕ್ಕೆ ನಾನು ಆಸ್ಪದ ನೀಡುವುದಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.ಪಕ್ಷ ಸಂಘಟನೆ: ರಾಜ್ಯ ಚುನಾವಣೆ ಆಯೋಗವು ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ನಡೆಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೆ ಸೂಚನೆ ನೀಡಿದ್ದು, ಟಿಕೆಟ್ ಆಕಾಂಕ್ಷಿಗಳು ಕಾರ್ಯಕರ್ತರು ತಮ್ಮ ವಾರ್ಡ್‌ಗಳ ಜನರ ವಿಶ್ವಾಸಕ್ಕೆ ಪಡೆದು ಪಕ್ಷ ಸಂಘಟಿಸಿ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ, ಗಣೇಶ ವೇರ್ಣೇಕರ್, ಶಂಭಣ್ಣ ಗೂಳಪ್ಪನವರ, ಬಸವರಾಜ ಆಡಿನವರ, ಪರಮೇಶಪ್ಪ ಹಲಗೇರಿ, ರಾಘವೇಂದ್ರ ಹರವಿಶೆಟ್ಟರ್, ರವಿ ಹದಡೇರ, ಮಾಲತೇಶ ಬೆಳಕೆರಿ, ಸಿದ್ದು ಹಲಗೇರಿ, ಹನುಮಂತಪ್ಪ ಗಾಜೇರ್, ಸುಶೀಲ್ ನಾಡಿಗೇರ, ಪ್ರಶಾಂತ ದ್ಯಾವಕ್ಕಳವರ, ಶ್ರೀನಿವಾಸ ಬೈರೋಜಿಯವರ, ಮನೋಜ ಗೋಣೆಪ್ಪನವರ, ಸಿದ್ದು ಸಾವಕ್ಕನವರ, ಬಸವರಾಜ ಕಟ್ಟಿಮನಿ, ಅಬ್ರಾರ ಖಾಜಿ, ಸಿದ್ದಪ್ಪ ಹರಿಜನ ಮುಂತಾದವರು ಇದ್ದರು.