ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಆರನೇ ತುಂಗಾರಾತಿ ಕಾರ್ಯಕ್ರಮವನ್ನು ಭಕ್ತರ ಆಶಯದಂತೆ ತುಂಗಭದ್ರಾ ಆರತಿ ಎಂಬುದಾಗಿ ನದಿಯ ಪೂರ್ಣ ಪ್ರಮಾಣದ ಹೆಸರಿನಲ್ಲಿ ಬದಲಿಸಿ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಲಯೋಗಿ ಜಗದೀಶ್ವರ ಶ್ರೀ ಹೇಳಿದರು. ನಗರದ ಸಮೀಪದ ಕೋಡಿಯಲ ಹೊಸಪೇಟೆ ಗ್ರಾಮದ ತುಂಗಭದ್ರಾ ನದಿ ದಡದಲ್ಲಿರುವ ಪುಣ್ಯಕೋಟಿ ಮಠದಿಂದ ಆಯೋಜಿಸಿರುವ ತುಂಗಭದ್ರಾ ಆರತಿ ಎಂದು ಕಾರ್ಯಕ್ರಮ ಘೋಷಣೆ ಮಾಡಿರುವ ಹಿನ್ನೆಲೆ ಹರಿಹರದ ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರು ಹಾಗೂ ಮಾಧ್ಯಮ ಮಿತ್ರರಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಪುಣ್ಯಕೋಟಿ ಮಠಕ್ಕೆ ಭಕ್ತರೇ ಆಸ್ತಿ ಅವರ ಕೋರಿಕೆಗೆ ಶ್ರೀಮಠವು ಎಂದಿಗೂ ಸಮ್ಮತಿಸುತ್ತಿದೆ. ಅವರ ಆಶಯದಂತೆ ತುಂಗಭದ್ರಾ ಆರತಿ ಕಾರ್ಯಕ್ರಮ ನಡೆಯೋದು ನಮಗೂ ಖುಷಿ ತಂದಿದೆ ಎಂದರು.ಹಿರಿಯ ಸಾಹಿತಿ, ಪ್ರೊ. ಸಿ.ವಿ.ಪಾಟೀಲ್ ಮಾತನಾಡಿ, ಹರಿಹರ ಮತ್ತು ರಾಣೆಬೆನ್ನೂರು ತಾಲೂಕಿನ ಜನರ ಜೀವನದಿ ತುಂಗಭದ್ರಾ ನದಿಗೆ ಐದು ವರ್ಷಗಳಿಂದ ಶ್ರೀಗಳು ತುಂಗಾರಾತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯ ಪೂರ್ಣ ಹೆಸರಿನಲ್ಲಿ ಕಾರ್ಯಕ್ರಮ ಆಗಬೇಕು ಎಂಬ ಪ್ರಶ್ನೆಗಳು ಹಲವರಲ್ಲಿ ಮೂಡಿತ್ತು. ಜನರ ಆಶೋತ್ತರಗಳಿಗೆ ಮಠವು ಮನ್ನಣೆ ನೀಡಿರುವುದು ಅಭಿನಂದನೀಯ ಎಂದರು.ಹಿರಿಯ ಸಾಹಿತಿ ಪ್ರೊ. ಭೀಕ್ಷಾವರ್ತಿಮಠ, ಕಾರ್ಮಿಕ ಮುಖಂಡ ಎಚ್.ಕೆ ಕೊಟ್ರಪ್ಪ ಮಾತಾಡಿದರು. ನಗರಸಭೆ ಸದಸ್ಯ ಕೆ.ಬಿ ರಾಜಶೇಖರ್, ವಾಲ್ಮೀಕಿ ಮಠದ ಧರ್ಮದರ್ಶಿ ಕೆ.ಬಿ ಮಂಜುನಾಥ್, ಆಧ್ಯಾತ್ಮಿಕ ಚಿಂತಕ ವೀರೇಶ್ ಅಜ್ಜಣ್ಣನವರ್, ಉದ್ಯಮಿ ಸುರೇಶ್ ರಾಜೇನವರ್, ಪತ್ರಕರ್ತರಾದ ಶೇಖರಗೌಡ ಪಾಟೀಲ್, ಜಿ.ಕೆ ಪಂಚಾಕ್ಷರಿ. ಮಾತನಾಡಿದರು. ಕೃಷ್ಣ ರಾಜೊಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಚೇತನ್ ಸೇರಿದಂತೆ ಇತರರಿದ್ದರು.
- - - -14ಎಚ್‍ಆರ್‍ಆರ್05:ಹರಿಹರದ ಸಾಹಿತಿಗಳು, ಚಿಂತಕರು, ಮಾಧ್ಯಮದವರು ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು.