ಸಾರಾಂಶ
ರಾಣಿಬೆನ್ನೂರು: ಉತ್ತರ ಭಾರತದ ಗಂಗಾ ನದಿಯಲ್ಲಿ ನಡೆಯುವ ಗಂಗಾರತಿಯಂತೆಯೇ ತುಂಗಭದ್ರಾ ಆರತಿ ಎಂಬ ಸಂಪ್ರದಾಯ ಪುಣ್ಯಕೋಟಿ ಮಠದಿಂದ ಜೀವ ಪಡೆದುಕೊಳ್ಳುತ್ತಿದೆ. ತುಂಗಭದ್ರಾ ಆರತಿಯು ಜಾತಿ, ಬೇಧ ಭಾವ ಅಳಿಸುವ ಸಾಮರಸ್ಯದ ಸಂಕೇತವಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದ ತುಂಗಭದ್ರಾ ನದಿ ದಂಡೆಯಲ್ಲಿ ನಡೆದ ತುಂಗಭದ್ರಾ ಆರತಿ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನದಿಗಳ ಶುದ್ಧತೆ ಹಾಗೂ ಪಾವಿತ್ರ‍್ಯತೆಗೆ ಕಠಿಣ ಕಾನೂನು ರೂಪಿಸಿ, ಕಟ್ಟುನಿಟ್ಟಾಗಿ ಪರಿಪಾಲಿಸುವ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು. ಅಣೆಕಟ್ಟುಗಳು ಹಾಗೂ ನದಿಗಳು ಬೇಸಿಗೆ ಸಂದರ್ಭದಲ್ಲಿ ಬತ್ತಿಹೋಗದಂತೆ ನೋಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ನದಿಯ ದಡದಲ್ಲಿ ಗಿಡಗಳನ್ನು ನೆಡುವ ಮೂಲಕ ನದಿಯ ನೀರು ಬಿಸಿಲಿನ ಬೇಗೆಗೆ ಆವಿಯಾಗುವುದನ್ನು ತಡೆಯಬೇಕಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಹರಿಯುವ ಜೀವನದಿ ತುಂಗಭದ್ರಾ ಉತ್ಸವ ಕಳೆದ ಆರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಭಾರತೀಯ ಸಂಸ್ಕೃತಿಯಲ್ಲಿ ನದಿಗಳಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಈ ಕಾರಣಕ್ಕಾಗಿಯೇ ಪುಣ್ಯಕ್ಷೇತ್ರಗಳಿಗೆ ತೆರಳಿದಾಗ ನದಿಯಲ್ಲಿ ಸ್ನಾನ ಮಾಡಿ ಪಾಪಗಳನ್ನು ತೊಳೆದುಕೊಳ್ಳಬೇಕು ಎಂಬ ನಂಬಿಕೆ ಭಾರತೀಯರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ನದಿಯ ಮಹತ್ವವನ್ನೇ ಸಾರುವ ಗಂಗಾಸ್ನಾನ, ತುಂಗಾಪಾನ ಎಂಬ ಮಾತು ಇಂದಿಗೂ ಜನಪ್ರಿಯವಾಗಿದೆ ಎಂದರು.
ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಜಗದೀಶ್ವರ ಶ್ರೀಗಳ ಪಟ್ಟಾಧಿಕಾರ ಎರಡು ಬಾರಿ ಮುಂದಕ್ಕೆ ಹೋಗಿದೆ. ಹಾಗಾಗಿ ಶ್ರೀಶೈಲ ಶ್ರೀಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ದಿನಾಂಕ ನಿಗದಿ ಮಾಡೋಣ ಮತ್ತು ಶ್ರೀಮಠದ ಭಕ್ತರಾಗಿರುವ ರುದ್ರಪ್ಪ ಲಮಾಣಿ ಅವರು ಮುಂಬರುವ ದಿನಗಳಲ್ಲಿ ಸಚಿವರಾಗಿ ಶ್ರೀಮಠಕ್ಕೆ ₹5 ಕೋಟಿ ಅನುದಾನ ನೀಡಲಿ ಎಂದರು.ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಇದೇ ಸಂದರ್ಭದಲ್ಲಿ ಕೊಡಿಯಾಲ ಹೊಸಪೇಟೆಯ ನೀಲಮ್ಮ ಸಣ್ಣಹನುಮಂತಗೌಡ ಪಾಟೀಲ ಅವರಿಗೆ ಗೌರವ ಶ್ರೀ ರಕ್ಷೆ ನೀಡಲಾಯಿತು. ಸವಣೂರ ದೊಡ್ಡಹುಣಸೇ ಕಲ್ಮಠದ ಚನ್ನಬಸವ ಶ್ರೀಗಳು, ವಿಜಯಪುರ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಶ್ರೀಗಳು, ನಾವಂದ ಶಿವಯೋಗಿ ಶಿವಾನಂದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಗ್ರಾಸಿಂ ಬಿರ್ಲಾ ಕಂಪನಿ ಅಧ್ಯಕ್ಷ ಸೌಮ್ಯಕಾಂತ ಮೊಹಂತಿ, ರವೀಂದ್ರಗೌಡ ಪಾಟೀಲ, ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಎಚ್. ವಿಶ್ವನಾಥ್, ನಳಿನಿ ಪ್ರವೀಣಕುಮಾರ, ಗುತ್ತಿಗೆದಾರರ ಶಂಕರ ಗಡ್ಡದ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ನಿಂಗರಾಜ ಕೋಡಿಹಳ್ಳಿ, ಸಿದ್ದು ಚಿಕ್ಕಬಿದರಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣೇಶ, ಮುಖಂಡ ಚಂದ್ರಶೇಖರ ಪೂಜಾರ, ಎಚ್. ವಿಶ್ವನಾಥ, ವಾಣಿ ಬಕ್ಕೇಶ, ಶಶಿಕುಮಾರ ಮೆಹರವಾಡೆ, ಗ್ರಾಪಂ ಮಾಜಿ ಅಧ್ಯಕ್ಷ ಚೇತನ ಪೂಜಾರ, ಮಾಜಿ ಸದಸ್ಯ ಕರಿಯಪ್ಪ ಮಾಳಗೇರ, ಕುಮಾರಸ್ವಾಮಿ ಹಿರೇಮಠ ಮತ್ತಿತರರು ಇದ್ದರು.