ಸಾರಾಂಶ
ಕೊಪ್ಪಳ: ತುಂಗಭದ್ರಾ ಬೋರ್ಡ್‌ನಿಂದಲೇ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದು, ಈಗ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ವಿಳಂಬವಾಗಲು ಬೋರ್ಡ್ ನೇರ ಹೊಣೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ಮಾಡಿದ್ದಾರೆ.
''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಬೋರ್ಡ್ ರಾಜ್ಯದ ಪಾಲಿಗೆ ಬಿಳಿ ಆನೆಯಂತೆ ಇದೆ. ಜಲಾಶಯ ನಮ್ಮದು, ನೀರು ನಮ್ಮದು, ಅದರ ನಿರ್ವಹಣೆ ನಮ್ಮದು. ಆದರೂ ನಿಯಂತ್ರಣ ಮಾತ್ರ ತುಂಗಭದ್ರಾ ಬೋರ್ಡ್ ಮಾಡುತ್ತದೆ. ಇದ್ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದ್ದಾರೆ.ತುಂಗಭದ್ರಾ ಬೋರ್ಡ್ ನಿರ್ವಹಣೆಯಲ್ಲಿಯೂ ಕೇಂದ್ರ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಅದರ ಕಾರ್ಯದರ್ಶಿ ಆಂಧ್ರ ಮತ್ತು ಕರ್ನಾಟಕಕ್ಕೆ ಸೇರಿದವರು ಆಗಬಾರದು ಎನ್ನುವ ನಿಯಮ ಇದೆ. ಆದರೂ ಕಳೆದ ಹತ್ತಾರು ವರ್ಷಗಳಿಂದ ತುಂಗಭದ್ರಾ ಬೋರ್ಡ್ ಕಾರ್ಯದರ್ಶಿ ಮಾತ್ರ ಆಂಧ್ರದವರೇ ಇರುತ್ತಾರೆ. ಇದರಿಂದ ರಾಜ್ಯಕ್ಕೆ ಅನ್ಯಾಯ ಮುಂದುವರಿದಿದೆ ಎಂದರು.
ತುಂಗಭದ್ರಾ ಕ್ರಸ್ಟ್ ಗೇಟ್ ಕಳೆದ ವರ್ಷ ಮುರಿದಿದ್ದರೂ ಅದನ್ನು ತಕ್ಷಣ ದುರಸ್ತಿ ಮಾಡಿಲ್ಲ ಮತ್ತು ದುರಸ್ತಿಗೆ ಅನುಮತಿ ನೀಡಲಿಲ್ಲ. ಈಗ 33 ಕ್ರಸ್ಟ್‌ಗೇಟ್‌ಗಳೂ ಸುಸ್ಥಿತಿಯಲ್ಲಿಲ್ಲ. ತುರ್ತಾಗಿ ಬದಲಾಯಿಸುವಂತೆ ತಜ್ಞರು ಸೂಚಿಸಿದ್ದಾರೆ. ಆದರೂ ಅದನ್ನು ಮಾಡುವುದಿರಲಿ, ಮುರಿದಿರುವ 19ನೇ ಕ್ರಸ್ಟ್‌ಗೇಟ್ ಸಹ ಹೊಸದಾಗಿ ಅಳವಡಿಸಲೇ ಇಲ್ಲ. ಇದರ ಪರಿಣಾಮ ಈಗ ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತದೆ. ಇದರಿಂದ ನೀರು ಪೋಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕೇಂದ್ರ ಮನವೊಲಿಸಲಿ: ತುಂಗಭದ್ರಾ ಕ್ರಸ್ಟ್‌ಗೇಟ್ ಸಮಸ್ಯೆ ಆಗಿರುವುದಕ್ಕೆ ರಾಜ್ಯ ಸರ್ಕಾರ ದೂರುವ ಬದಲು ಬಿಜೆಪಿ ನಾಯಕರು ಮೊದಲು ಕೇಂದ್ರದ ಮನವೊಲಿಸಲಿ. ಕೇಂದ್ರ ಸರ್ಕಾರದ ಮೂಲಕ ತುಂಗಭದ್ರಾ ಬೋರ್ಡ್ ಚುರುಕಾಗಿ ಕ್ರಮ ವಹಿಸುವಂತೆ ಮಾಡಲಿ. ಸಾಧ್ಯವಾದರೆ ಕೇಂದ್ರ ಜಲಸಂಪನ್ಮೂಲ ಸಚಿವರನ್ನೊಮ್ಮೆ ಭೇಟಿ ಮಾಡಿಸಿ ತುಂಗಭದ್ರಾ ಬೋರ್ಡ್‌ನಲ್ಲಿ ನಿಯಮಾನುಸಾರ ಕಾರ್ಯದರ್ಶಿಗಳ ನೇಮಕ ಮಾಡಲಿ, ಅದು ಬಿಟ್ಟು ಕೇವಲ ಆಂಧ್ರದವರನ್ನೇ ನಿಯಮಬಾಹಿರವಾಗಿ ನೇಮಕ ಮಾಡುವುದು ಯಾಕೆ? ತಕ್ಷಣ, ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತುಂಗಭದ್ರಾ ಬೋರ್ಡ್ ರದ್ದು ಮಾಡಿಸುವ ಮೂಲಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಕಾರ್ಯ ಮಾಡಲಿ ಎಂದು ಕಿಡಿಕಾರಿದ್ದಾರೆ.
ತುಂಗಭದ್ರಾ ಬೋರ್ಡ್‌ನಲ್ಲಿ ಎಂಥೆಂತ ಅನ್ಯಾಯವಾಗುತ್ತಿದೆ ಗೊತ್ತಾ? ದೇಶದ ಯಾವ ಜಲಾಶಯದಲ್ಲಿಯೂ ಇಲ್ಲದ ಅವಿಯಾಗುವಿಕೆ ತುಂಗಭದ್ರಾ ಜಲಾಶಯದಲ್ಲಿದೆ. ಪ್ರತಿ ವರ್ಷ ಹತ್ತಾರು ಟಿಎಂಸಿ ಆವಿಯಾಗುತ್ತದೆ ಎಂದು ಲೆಕ್ಕ ತೋರಿಸಲಾಗುತ್ತದೆ. ಇದನ್ನು ಪ್ರಶ್ನೆ ಮಾಡಬೇಕು. ಈ ಅನ್ಯಾಯ ಬೋರ್ಡ್‌ನಲ್ಲಿ ಆಗುತ್ತಿರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ತಡೆಯುವ ಕಾರ್ಯವನ್ನು ರಾಜ್ಯ ಬಿಜೆಪಿ ನಾಯಕರು ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.