ಸಾರಾಂಶ
ಕಾಲುವೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ತುಂಬಿಕೊಂಡ ಹಿನ್ನೆಲೆಯಲ್ಲಿ ನೀರು ಮುಂದೆ ಸಾಗುತ್ತಿಲ್ಲ. ಇದಕ್ಕಾಗಿ ನೀರನ್ನು ನಿಲ್ಲಿಸಲಾಗಿದೆ. ಭಾನುವಾರ ಬೆಳಗ್ಗೆ ಕಾಲುವೆಯಲ್ಲಿ ನೀರು ಹರಿಸಲಾಗುವುದು ಎಂದು ಕಾರ್ಯಪಾಲಕ ಅಭಿಯಂತರ ಗಿರೀಶ ಮೇಟಿ ತಿಳಿಸಿದ್ದಾರೆ.
ಮುನಿರಾಬಾದ್:
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯಲ್ಲಿ ಎರಡನೇ ಬಾರಿಗೆ ನೀರು ಹರಿಸುವುದನ್ನು ಬಂದ್ ಮಾಡಿದ್ದು ರೈತರ ಆಕ್ರೋಶ ಕಟ್ಟೆಹೊಡಿದಿದೆ.ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕಾರ್ಯಪಾಲಕ ಅಭಿಯಂತರ ಗಿರೀಶ ಮೇಟಿ, ಕಾಲುವೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ತುಂಬಿಕೊಂಡ ಹಿನ್ನೆಲೆಯಲ್ಲಿ ನೀರು ಮುಂದೆ ಸಾಗುತ್ತಿಲ್ಲ. ಇದಕ್ಕಾಗಿ ನೀರನ್ನು ನಿಲ್ಲಿಸಲಾಗಿದೆ. ಭಾನುವಾರ ಬೆಳಗ್ಗೆ ಕಾಲುವೆಯಲ್ಲಿ ನೀರು ಹರಿಸಲಾಗುವುದು ತಿಳಿಸಿದ್ದಾರೆ.ಎಡದಂಡೆ ಮೇಲ್ಮಟ್ಟದ ಕಾಲುವೆಯು ಮುನಿರಾಬಾದ್, ಲಿಂಗಾಪೂರ, ಹೊಸಳ್ಳಿ ಬೇವಿನಹಳ್ಳಿ, ಲಿಂಗದಹಳ್ಳಿ, ಶಾಹಪುರ ಹಾಗೂ ಹಿಟ್ನಾಳ ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ಈ ಗ್ರಾಮದ ಜನರು ಪ್ಲಾಸ್ಟಿಕ್ ಹಾಗೂ ಇತರೆ ಕಸವನ್ನು ಕಾಲುವೆಯಲ್ಲಿ ಹಾಕುತ್ತಿರುವುದರಿಂದ ಕಾಲುವೆಯಲ್ಲಿ ನೀರು ಹರಿದು ಮುಂದಕ್ಕೆ ಹೋಗುತ್ತಿಲ್ಲ. ಹುಲಿಗಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸುತೆವೆ ಕಾಮಗಾರಿ ನಡೆದಿದೆ. ಕಾಲುವೆಯು ಹೆದ್ದಾರಿಯಲ್ಲಿ ಅಡ್ಡಲಾಗಿ ಹಾದು ಹೋಗಿದ್ದು ಇದರಲ್ಲಿ ಕಸ ತುಂಬಿಕೊಂಡಿದೆ. ಇದನ್ನು ತೆಗಿಯುವ ಕಾರ್ಯವು ಸಹ ನಡೆಯುತ್ತಿದ್ದು ರೈತರು ಸಹಕರಿಸಬೇಕೆಂದು ಗಿರೀಶ ಮೇಟಿ ಮನವಿ ಮಾಡಿದ್ದಾರೆ.ಇತ್ತ ಅಧಿಕಾರಿಗಳು ಪದೇ ಪದೇ ಕಾಲುವೆಯಲ್ಲಿ ನೀರು ಬಂದ್ ಮಾಡುತ್ತಿರುವುದನ್ನು ರೈತರು ಖಂಡಿಸಿದ್ದಾರೆ. ನೀರು ಹರಿಸುವ ಮೊದಲೇ ಕಾಲುವೆ ಸ್ವಚ್ಛಗೊಳಿಸಬೇಕೆಂದು ರೈತರು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.