ತುಂಗಭದ್ರಾ ಡ್ಯಾಂ ಗೇಟ್‌ ಕಳಚಿ ಬಿದ್ದ ಪ್ರಕರಣ: ತಾಂತ್ರಿಕ ಪರಿಶೀಲನಾ ಸಮಿತಿ ರಚನೆ

| Published : Sep 06 2024, 01:08 AM IST

ಸಾರಾಂಶ

ಪರಿಣತ ತಜ್ಞ ಎ.ಕೆ. ಬಜಾಜ್ ಮುಖ್ಯಸ್ಥರಾಗಿದ್ದು, ಈ ಸಮಿತಿ ಇನ್ನೂ ಐವರು ಸದಸ್ಯರನ್ನು ಒಳಗೊಂಡಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್‌ಗೇಟ್ ಕಳಚಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಪರಿಣತ ತಜ್ಞ ಎ.ಕೆ. ಬಜಾಜ್ ನೇತೃತ್ವದಲ್ಲಿ ತಾಂತ್ರಿಕ ಪರಿಶೀಲನಾ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಸೆ.೯, ೧೦ರಂದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಪರಿಣತ ತಜ್ಞ ಎ.ಕೆ. ಬಜಾಜ್ ಮುಖ್ಯಸ್ಥರಾಗಿದ್ದು, ಈ ಸಮಿತಿ ಇನ್ನೂ ಐವರು ಸದಸ್ಯರನ್ನು ಒಳಗೊಂಡಿದೆ. ದಿಲ್ಲಿಯ ತಜ್ಞ ಹರ್ಕೇಶಕುಮಾರ, ಆಂಧ್ರಪ್ರದೇಶದ ತಾರಾಪುರಂ ಸುಧಾಕರ್, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ತಲಾ ಒಬ್ಬರು ಪ್ರತಿನಿಧಿಗಳು ಈ ಸತ್ಯಶೋಧನಾ ಸಮಿತಿಯಲ್ಲಿ ಇರಲಿದ್ದಾರೆ.

ಈ ಸಮಿತಿ ಕಾರ್ಯ ಏನು?: ಜಲಾಶಯದ ೩೩ ಕ್ರಸ್ಟ್ ಗೇಟ್‌ಗಳನ್ನು ಈ ಹಿಂದೆ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ತಾಂತ್ರಿಕ ಸಮಿತಿಯು ಕೊಟ್ಟ ವರದಿಗಳನ್ನು ತನಿಖೆಗೆ ಒಳಪಡಿಸಿ ವರದಿ ಸಲ್ಲಿಸಲಿದೆ. ತುಂಗಭದ್ರಾ ಜಲಾಶಯ ಖಾಲಿಯಾದಾಗ, ಭರ್ತಿಯಾದ ನಂತರದ ಮಾಹಿತಿಗಳ ಪರಿಶೀಲನೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಗೇಟ್‌ಗಳನ್ನು ನಿರ್ವಹಣೆ ಮಾಡಿದ್ದು, ಹೇಗೆ? ಸಲ್ಲಿಕೆ ಮಾಡಿದ ವರದಿ ಏನು? ಎನ್ನುವುದನ್ನು ಈ ಸಮಿತಿ ಪರಿಶೀಲಿಸಲಿದೆ. ನೀರು ಬಿಡುವ ಮುನ್ನ ಎಷ್ಟು ಬಾರಿ ಗೇಟ್ ಪರಿಶೀಲನೆ ಮಾಡಲಾಗಿದೆ. ೧೯ನೇ ಗೇಟ್ ಕಳಚಿ ಬಿದ್ದು ಹೋಗಲು ನಿಖರ ಕಾರಣ ಏನು? ಎಂಬುದನ್ನು ಕೂಡ ತಂಡ ಪರಿಶೀಲನೆ ನಡೆಸಲಿದೆ. ಈ ತಂಡ ತುಂಗಭದ್ರಾ ಜಲಾಶಯದ ೩೨ ಕ್ರಸ್ಟ್ ಗೇಟ್‌ಗಳ ಸ್ಥಿತಿಗತಿ, ಅವುಗಳ ಗುಣಮಟ್ಟದ ಕುರಿತು ಪರಿಶೀಲಿಸಿ, ವರದಿಯನ್ನು ಸಲ್ಲಿಸಲಿದೆ. ಜಲಾಶಯದ ಗೇಟ್‌ಗಳನ್ನು ನಿಖರವಾಗಿ ಎರಡು ದಿನಗಳ ವರೆಗೆ ಈ ಸಮಿತಿ ಸದಸ್ಯರು ಪರಿಶೀಲನೆ ನಡೆಸಲಿದ್ದಾರೆ. ಗೇಟ್‌ಗಳ ಬಲವರ್ಧನೆಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳು, ಸ್ಟಾಪ್ ಲಾಗ್ ಎಲಿಮೆಂಟ್‌ಗಳ ಲಭ್ಯತೆ ಬಗ್ಗೆಯೂ ಈ ತಂಡ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಸೆ.೯ ಮತ್ತು ೧೦ರಂದು ಎರಡು ದಿನಗಳವರೆಗೆ ಜಲಾಶಯದಲ್ಲಿ ಈ ಸಮಿತಿ ಪರಿಶೀಲನೆ ನಡೆಸಲಿದೆ. 15 ದಿನದೊಳಗೆ ವರದಿ ನೀಡಲಿದೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ತಿಳಿಸಿದರು.