ತುಂಗಭದ್ರಾ ಜಲಾಶಯಕ್ಕೆ ನವಿಲೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಿ
ಬಳ್ಳಾರಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರವಾಗಿ ನವಿಲೆ ಜಲಾಶಯ ನಿರ್ಮಾಣಕ್ಕಾಗಿ ₹1 ಸಾವಿರ ಕೋಟಿ ಅನುದಾನ ಮೀಸಲು ಮಾಡಿದ್ದು, ನವಿಲೆ ಸಮಾನಾಂತರ ಜಲಾಶಯದ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಬಳ್ಳಾರಿ- ವಿಜಯನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಶಾಸಕ ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಶುಕ್ರವಾರ ಈ ವಿಷಯವನ್ನು ಪ್ರಸ್ತಾಪಿಸಿದ ವೈ.ಎಂ. ಸತೀಶ್, ತುಂಗಭದ್ರಾ ಜಲಾಶಯಕ್ಕೆ ನವಿಲೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಿ, ಭವಿಷ್ಯದಲ್ಲಿ ಅಕಾಲಿಕ ಮಳೆ ಮತ್ತು ನೀರಾವರಿಗೆ ನೀರಿನ ಕೊರತೆ ಆಗುವ ಸಮಸ್ಯೆಯನ್ನು ತಪ್ಪಿಸಲು ಪ್ರಯತ್ನಿಸಬೇಕು. ಆದರೆ, ಬಳ್ಳಾರಿ, ಬಳ್ಳಾರಿ ಗ್ರಾಮಾಂತರ- ಸಿರುಗುಪ್ಪ ಮತ್ತು ವಿಜಯನಗರ ವ್ಯಾಪ್ತಿಯಲ್ಲಿ ಎರಡನೇ ಬೆಳೆಗೆ 6 ರಿಂದ 7 ಟಿಎಂಸಿ (6.80 ಟಿಎಂಸಿ) ಪ್ರಮಾಣದ ನೀರನ್ನು ಹರಿಸಲು ಸಾಧ್ಯವಿತ್ತು. ಆದರೆ, ಸಮನಾಂತರ ಜಲಾಶಯ ನಿರ್ಮಾಣವಾಗದಿರುವುದರಿಂದ ಬೆಳೆಗಳಿಗೆ ನೀರಿನ ಸಮಸ್ಯೆಯಾಗಿ ಪರಿಣಮಿಸಿದೆ.ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಸಂಡೂರು ತಾಲೂಕಿನಲ್ಲಿ ಕೆರೆ ತುಂಬಿಸುವ ಕೆಲಸವನ್ನು ಮಾಡಬೇಕಿದೆ. ಪಾವಗಡಕ್ಕೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಮಾರ್ಗಮಧ್ಯದಲ್ಲಿ ಬರುವ ಕೊಟ್ಟೂರಿಗೆ ನೀರು ಪೂರೈಸಲು ಸಾಧ್ಯವಾಗಿಲ್ಲ. ಕಂಪ್ಲಿಯಲ್ಲಿ ಭಾಗಶಃ ಕೆರೆ ತುಂಬಿಸುವ ಕೆಲಸ ಮಾಡಬೇಕು. ನೀರು ನಿರ್ವಹಣೆ ಮತ್ತು ಸಂರಕ್ಷಣೆ ಕುರಿತು ಜನಸಾಮಾನ್ಯರಿಗೆ - ರೈತರಿಗೆ ಜಾಗೃತಿ ಮೂಡಿಸಬೇಕಿದೆ. ಇಲ್ಲವಾದಲ್ಲಿ ಕೃಷಿ ಸಂಕಷ್ಟಕ್ಕೆ ಗುರಿಯಾಗಿ, ರೈತರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಾರಣ, ತುಂಗಭದ್ರ ಜಲಾಶಯಕ್ಕೆ ಸಮಾನಾಂತರವಾಗಿ ನವಿಲೆ ಸಮಾನಾಂತರ ಜಲಾಶಯವನ್ನು ತ್ವರಿತವಾಗಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ಅವರು ಸದನದಲ್ಲಿ ಮನವಿ ಮಾಡಿದ್ದಾರೆ.