ತುಂಗಭದ್ರಾ ಯೋಜನೆ ಕಾಮಗಾರಿ ವಿಳಂಬ: ಪೆ. 19ಕ್ಕೆ ಪ್ರತಿಭಟನೆ

| Published : Jan 25 2024, 02:02 AM IST / Updated: Jan 25 2024, 02:03 AM IST

ಸಾರಾಂಶ

ತುಂಗಭದ್ರಾ ಕಾಮಗಾರಿ ಪೂರ್ಣಗೊಳಿಸಲು ಮೀನಮೇಷ; ಪಾವಗಡದಲ್ಲಿ ಫೆ. 19 ರಂದು ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಪಾವಗಡ

ಜಿಪಂ ಕುಡಿವ ನೀರು ವಿಭಾಗದ ಎಇಇ ಹಾಗೂ ಜೆಇ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದ ಪರಿಣಾಮ ವಿಳಂಬವಾಗುತ್ತಿದ್ದು ಶುದ್ಧ ನೀರಿಗಾಗಿ ತೀವ್ರ ಪರದಾಟವಾಗಿದೆ. ಮಾರ್ಚ್ ಒಳಗೆ ತುಂಗಭದ್ರಾ ಯೋಜನೆಯ ಕುಡಿವ ನೀರು ತಾಲೂಕಿನ ಮನೆಮನೆಗೆ ಪೂರೈಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ, ತಾಲೂಕು ಶಾಖೆಯಿಂದ ಬರುವ ಫೆ.19ರಂದು ಪ್ರತಿಭಟನೆ ಹಾಗೂ ತಾಲೂಕು ಕಚೇರಿಯ ಬಳಿ ಅನಿರ್ದಿಷ್ಟಾವಾಧಿ ಮುಷ್ಕರ ಹಮ್ಮಿಕೊಂಡಿರುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ದೊಡ್ಡಹಟ್ಟಿಯ ಪೂಜಾರಪ್ಪ ಹೇಳಿದರು.

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರೈತ ಸಂಘ, ಪಾವಗಡ ತಾಲೂಕು ಶಾಖೆಯ ನೇತೃತ್ವದಲ್ಲಿ ಇಲ್ಲಿನ ದಲಿತ, ಹಮಾಲಿ ಕಾರ್ಮಿಕ, ಆಟೋ ಲಾರಿ ಚಾಲಕರು ಇತರೆ ಪ್ರಗತಿ ಪರ ಸಂಘಟನೆಯ ಹಾಗೂ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಪಕ್ಷತೀತಾ ಸಹಕಾರದ ಮೇರೆಗೆ ನಿರಂತರ ಹೋರಾಟದ ಫಲದ ಹಿನ್ನೆಲೆಯಲ್ಲಿ, ಪಾವಗಡ ತಾಲೂಕಿಗೆ ಸೇರಿದಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಪ್ರದೇಶಗಳ ಪೂರೈಕೆಗೆ 2.352 ಕೋಟಿ ವೆಚ್ಚದ ತುಂಗಭದ್ರಾ ಕುಡಿವ ನೀರು ಯೋಜನೆಯ ಜಾರಿಗೆ ಬಂದಿದ್ದು, ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಬಳ್ಳಾರಿಯ ಹೊಸಪೇಟೆ ಡ್ಯಾಂನಿಂದ ಈ ನೀರು ತಾಲೂಕಿಗೆ ಪೂರೈಕೆ ಆಗಬೇಕಿದೆ. ಆಂಧ್ರದ ಹೈದರಬಾದ್‌ ಮೂಲದ ಮೆಗಾ ಕಂಪನಿಯೊಂದು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಅಗ್ರಿಮೆಂಟ್‌ ಕರಾರು ಅನ್ವಯ ಕಳೆದ 2023ರ ಜುಲೈ ಅಂತ್ಯಕ್ಕೆ ತಾಲೂಕಿಗೆ ತುಂಗಭದ್ರಾ ನೀರು ಪೂರೈಕೆ ಆಗಬೇಕಿತ್ತು. ಆದರೂ ಸರ್ಕಾರ ವಿಧಿಸಿದ್ದ ಗಡವು ಮೀರಿ ಐದು ತಿಂಗಳು ಕಳೆದಿದ್ದರೂ ತುಂಗಭದ್ರಾ ಯೋಜನೆಯ ನೀರು ಪೂರೈಕೆ ಆಗಿಲ್ಲ. ಈ ಯೋಜನೆಯ ವಿಳಂಬಕ್ಕೆ ಜಿಪಂ ಕುಡಿವ ನೀರು ವಿಭಾಗದ ಎಂಜಿನಿಯರ್‌ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ ಎಂದರು.

ಹೀಗಾಗಿ ಕುಡಿವ ನೀರು ಪೂರೈಕೆ ಮತ್ತು ಕೆರೆಗಳ ದುರಸ್ತಿಗೆ ಬಿಡುಗಡೆಯಾದ ಅನುದಾನದ ಮಾಹಿತಿ, ಪಟ್ಟಣದಲ್ಲಿ ಬೈಪಾಸು ರಸ್ತೆ ನಿರ್ಮಾಣ, ಬಗುರುಹುಕಂ ಸಾಗುವಳಿಯದಾರರಿಗೆ ಹಕ್ಕು ಪತ್ರ, ಬಡವರಿಗೆ ನಿರಂತರ ಪಡಿತರ ಚೀಟಿ ವಿತರಣೆ ಹಾಗೂ ಕುರಿ,ಮೇಕೆ ಇತರೆ ಸಾಕುಪ್ರಾಣಿಗಳ ಮೇಲೆ ದಾಳಿಯ ಪರಿಣಾಮ ಹೆಚ್ಚು ಸಾವನ್ನಪ್ಪುತ್ತಿದ್ದು, ಚಿರತೆ ಕರಡಿ ಕಾಡುಹಂದಿಯ ಹಾವಳಿ ತಪ್ಪಿಸಲು ಅರಣ್ಯ ಇಲಾಖೆಯ ಅಧಿಕಾರಿಗಳ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಇದೇ ಫೆ.19ರಿಂದ ತಾಲೂಕು ಕಚೇರಿಯ ಬಳಿ ಅನಿರ್ದಿಷ್ಟಾವಾಧಿ ಮುಷ್ಕರ ಹಮ್ಮಿಕೊಂಡಿದ್ದು ತಾಲೂಕಿನ ಎಲ್ಲಾ ಪ್ರಗತಿ ಪರ ಸಂಘಟನೆಗಳು ಬೆಂಬಲಿಸಿ ಸಹಕರಿಸುವಂತೆ ಅವರು ಮನವಿ ಮಾಡಿದರು.

ಇದೇ ವೇಳೆ ತಾಲೂಕು ರೈತ ಸಂಘದ ಕಾರ್ಯದರ್ಶಿ ನರಸಪ್ಪ, ಯುವ ಘಟಕದ ಕಾರ್ಯದರ್ಶಿ ಶಿವು, ನಲಿಗಾನಹಳ್ಳಿಯ ಮಂಜುನಾಥ್‌, ನಿಡಗಲ್‌ ಹೋಬಳಿ ಘಟಕದ ಅಧ್ಯಕ್ಷ ವೀರಭದ್ರಪ್ಪ, ಕನ್ನಮೇಡಿ ಕೃಷ್ಣಮೂರ್ತಿ, ಕೃಷ್ಣಗಿರಿಯ ಚಿತ್ತಯ್ಯ, ಗೋರಸ್‌ ಮಾವು ಸದಾಶಿವಪ್ಪ ಗುಡಿಪಲ್ಲಪ್ಪ, ಮುಗದಾಳಬೆಟ್ಟ ಚಿತ್ತಯ್ಯ, ರಾಮಾಂಜಿನಪ್ಪ, ರಾಮಚಂದ್ರಪ್ಪ, ಹನುಮಂತರಾಯಪ್ಪ, ನಾಗರಾಜಪ್ಪ, ಸಿದ್ದಪ್ಪ, ಚಂದ್ರು ಹನುಮಂತರಾಯ, ತಿಪ್ಪೇಸ್ವಾಮಿ ನರಸಿಂಹಪ್ಪ ಇತರೆ ಆನೇಕ ಮಂದಿ ರೈತ ಮುಖಂಡರು ಉಪಸ್ಥಿತರಿದ್ದರು.