ಭಾರೀ ಮಳೆ ಹಿನ್ನೆಲೆ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿ: ಹಂಪಿ ಸ್ಮಾರಕಗಳು ಮುಳುಗಡೆ

| Published : Jul 26 2024, 01:40 AM IST / Updated: Jul 26 2024, 12:56 PM IST

ಭಾರೀ ಮಳೆ ಹಿನ್ನೆಲೆ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿ: ಹಂಪಿ ಸ್ಮಾರಕಗಳು ಮುಳುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಹೊಸಪೇಟೆ: ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದ 28 ಕ್ರಸ್ಟ್ ಗೇಟ್‌ಗಳ ಮೂಲಕ ಗುರುವಾರ 71,262 ಕ್ಯುಸೆಕ್ ನೀರು ನದಿಗೆ ಹರಿಸಲಾಯಿತು. ಕಾಲುವೆ ಮೂಲಕ ನದಿಗೆ ನೀರು ಹರಿಸಲಾಗಿದ್ದು, ಒಟ್ಟು 83,649 ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಇದರಿಂದ ಹಂಪಿಯ ಪುರಂದರ ದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ ಸೇರಿದಂತೆ ಹಲವು ಸ್ಮಾರಕಗಳು ಮುಳುಗಡೆಯಾಗಿದ್ದು, ಕೆಲ ಸ್ಮಾರಕಗಳು ಜಲಾವೃತವಾಗಿವೆ.

ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ಒಳಹರಿವು 81 ಸಾವಿರಕ್ಕೂ ಅಧಿಕ ಇರುವ ಹಿನ್ನೆಲೆಯಲ್ಲಿ ಹಾಗೂ ನಿರಂತರ ಒಳಹರಿವು ಪ್ರಮಾಣ ಜಾಸ್ತಿಯಾಗುತ್ತಾ ಸಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಪೈಕಿ 20 ಗೇಟ್‌ಗಳನ್ನುತಲಾ ಎರಡು ಅಡಿ ಮತ್ತು ಎಂಟು ಗೇಟ್‌ಗಳನ್ನು ತಲಾ ಒಂದು ಅಡಿ ತೆರೆದು ಜಲಾಶಯದಿಂದ ನದಿಗೆ 71,262 ಕ್ಯುಸೆಕ್‌ ಹೊರಬಿಡಲಾಯಿತು.

ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಈಗಾಗಲೇ 102.576 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಜಲಾಶಯದಲ್ಲಿ 1632.20 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಹಂಪಿ ಸ್ಮಾರಕಗಳ ಮುಳುಗಡೆ:

ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲಾಡಳಿತ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಹಂಪಿಯಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲೂ ಪ್ರವಾಹ ಭೀತಿ ಎದುರಾಗಿದ್ದು, ನದಿ ತಟದ ಕೆಲ ಸ್ಮಾರಕಗಳು ನೀರಿನಲ್ಲಿ ಮುಳಗುಡೆಯಾಗಿವೆ. ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ನದಿ ತಟದಲ್ಲಿ ಮೊಕ್ಕಾಂ ಹೂಡಿದ್ದಾರೆ. ನದಿಯ ನೀರಿಗೆ ಪ್ರವಾಸಿಗರು ಇಳಿಯದಂತೆ ಎಚ್ಚರ ವಹಿಸಿದ್ದಾರೆ.

ಹಂಪಿಯ ಸ್ನಾನಘಟ್ಟ, ಧಾರ್ಮಿಕ ವಿಧಿವಿಧಾನ ಮಂಟಪ, ಪುರಂದರ ದಾಸರ ಮಂಟಪ, ವಿಷ್ಣು ಮಂಟಪಗಳು, ತುಂಗಾರತಿ ನೆರವೇರಿಸುವ ಸ್ಥಳ ಮುಳುಗಡೆಯಾಗಿದೆ. ಇನ್ನು ಕೋಟಿಲಿಂಗ, ಕಾಲು ಸೇತುವೆ, ರಾಮಕೃಷ್ಣ ದೇವಾಲಯದ ಬಳಿಯ ಚಕ್ರತೀರ್ಥ ಪ್ರದೇಶ ಜಲಾವೃತವಾಗಿದೆ.

ತೆಪ್ಪದಲ್ಲಿ ಪ್ರವಾಸೋದ್ಯಮ ಸ್ಥಗಿತ:

ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ ಹಿನ್ನೆಲೆಯಲ್ಲಿ ಹಂಪಿ ಹಾಗೂ ಆನೆಗೊಂದಿ ನಡುವೆ ಪ್ರವಾಸಿಗರನ್ನು ಹೊತ್ತು ಹೊಯ್ಯುತ್ತಿದ್ದ ಬೋಟ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ತೆಪ್ಪದಲ್ಲಿ ತುಂಗಭದ್ರಾ ನದಿಯ ಚಕ್ರತೀರ್ಥ ಪ್ರದೇಶ ವೀಕ್ಷಣೆಯನ್ನೂ ಈಗ ಸ್ಥಗಿತಗೊಳಿಸಲಾಗಿದೆ. ತೆಪ್ಪದಲ್ಲಿ ಹಂಪಿ ವೀಕ್ಷಣೆ ಪ್ರವಾಸೋದ್ಯಮಕ್ಕೆ ಭಾರೀ ಬೇಡಿಕೆ ಇತ್ತು. ಈಗ ಪ್ರವಾಹದ ಭೀತಿಯಿಂದ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.