ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ದುರಂತ ಸಂಭವಿಸಿ ಒಂದು ವರ್ಷ ಕಳೆದರೂ ಬದಲಿಸಿಲ್ಲ. ಇನ್ನೂ ಎಲ್ಲ ಗೇಟ್ ಯಾವಾಗ ಅಳವಡಿಕೆ ಮಾಡುತ್ತಾರೆ. ಇಂತಹ ತಾಂತ್ರಿಕ ಯುಗದಲ್ಲಿ ಇದೆಲ್ಲ ಇನ್ನೆಷ್ಟು ಸಮಯ ಬೇಕು. ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.ತುಂಗಭದ್ರಾ ಜಲಾಶಯದ ಜ್ವಲಂತ ಸಮಸ್ಯೆಗಳ ಕುರಿತು, ಪಕ್ಷಾತೀತ ಹೋರಾಟ ಸಮಿತಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ವತಿಯಿಂದ ಇಲ್ಲಿನ ಟಿಬಿ ಡ್ಯಾಂ ಆವರಣದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಗೇಟ್ ಕೂರಿಸಲು ಇನ್ನೂ ಎಷ್ಟು ಸಮಯ ಬೇಕು. ತಾಂತ್ರಿಕ ಯುಗದಲ್ಲಿ ವರ್ಷಗಟ್ಟಲೇ ಗೇಟ್ ಮಾಡಲು ಆಗಿಲ್ಲ. ರಸಗೊಬ್ಬರ ವಿಷಯದಲ್ಲೂ ಗೊಂದಲ ಮಾಡಿದ್ದರು. ಈಗ ನೀರಿನ ಗೊಂದಲ, ಸರ್ಕಾರಗಳಿಗೆ ಇಚ್ಛಾಶಕ್ತಿ ಇರಬೇಕು ಎಂದರು.
ನೀರಿನ ಕಳವು ತಡೆಯಬೇಕು. ಕೊನೆಯ ಭಾಗಕ್ಕೆ ನೀರು ಪೂರೈಕೆಯಾಗಬೇಕು. ಎರಡನೇ ಬೆಳೆಗೆ ಯಾಕೆ ನೀರಿಲ್ಲ. ಸದನದಲ್ಲಿ ಎರಡನೇ ಬೆಳೆ ನೀರಿನ ಬಗ್ಗೆ ಯಾಕೆ ಚರ್ಚೆಗೆ ಬಂತು ಗೊತ್ತಿಲ್ಲ. ಜಲಾಶಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊದಲನೇ ಬೆಳೆ ಸಂದರ್ಭದಲ್ಲಿಯೇ 2ನೇ ಬೆಳೆಗೆ ನೀರು ಕೊಡಬಾರದು ಎಂಬುದರ ಬಗ್ಗೆ ಮಾತಾಡುತ್ತಿರುವುದು ಖೇದಕರ. ಇದರ ಬಗ್ಗೆ ನವೆಂಬರ್ ಸಂದರ್ಭ ಪರಿಸ್ಥಿತಿ ನೋಡಿ ಹೇಳುತ್ತಾರೆ. ಇನ್ನೂ ಈ ಬಾರಿ ನವೆಂಬರ್‌ನಲ್ಲಿ ಕಟಾವು ಬರುತ್ತದೆ. 2ನೇ ಬೆಳೆಗೆ ನೀರು ಕೊಟ್ಟರೆ ಫೆಬ್ರವರಿಯಲ್ಲಿ ಕಟಾವಾಗುತ್ತದೆ. ಆಗ 40 ಟಿಎಂಸಿ ನೀರಿದ್ದರೂ ಗೇಟ್ ಕೂರಿಸಬಹುದು. ಜನವರಿಯಿಂದಲೇ ಕೂರಿಸಬಹುದು ಎಂದರು.ಮಾಜಿ ಶಾಸಕ ಗಂಗಾಧರ ನಾಯ್ಕ ಮಾತನಾಡಿ, ಸರ್ಕಾರ ಪರಿಣತ ತಜ್ಞ ಕನ್ನಯ್ಯ ನಾಯ್ಡು ಅವರಿಗೆ ಜವಾಬ್ದಾರಿ ಕೊಟ್ಟು ಗೇಟ್ ಕೂರಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ನೀರು ಕಳ್ಳತನದ ವಿರುದ್ಧ ಗಟ್ಟಿಯಾದ ನಿಯಮಗಳಿಲ್ಲ. ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಗೇಟ್ ಕೂರಿಸುವುದು ದೊಡ್ಡದಲ್ಲ. ಪ್ರತಿ ವರ್ಷ ನೀರಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಬರಬಾರದು ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಟಿಬಿ ಡ್ಯಾಂನಿಂದ ರೈತರಷ್ಟೇ ಅಲ್ಲ, ವ್ಯಾಪಾರ, ರೈಸ್ ಮಿಲ್, ಹಮಾಲರು, ಕೂಲಿಕಾರರು ಹೀಗೆ ಹಲವರು ಮೇಲೆ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಈ ಜಲಾಶಯ ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದೆ. ಕಾಲಕಾಲಕ್ಕೆ ಸರಿ ಮಾಡಿದ್ದರೆ, ಈ ಮಟ್ಟದ ಗಂಭೀರತೆ ಪಡೆದುಕೊಳ್ಳುತ್ತಿರಲಿಲ್ಲ. ಟಿಬಿ ಬೋರ್ಡ್ ನಲ್ಲಿ 96 ಎಂಜಿನಿಯರ್‌ಗಳ ಕೊರತೆ. ಸಿಬ್ಬಂದಿ ಇಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಸಿಗದೆ ಕೊನೆ ಭಾಗದ ರೈತರಿಗೆ ಸಮಸ್ಯೆಯಾಗುತ್ತಿದೆ. ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆಗಳು ನೆನೆಗುದಿಗೆ ಬಿದ್ದಿವೆ ಎಂದು ದೂರಿದರು.ಸರ್ಕಾರ ಎಲ್ಲ ನೀರಾವರಿ ಯೋಜನೆಗಳನ್ನು ಸಮನಾಂತರವಾಗಿ ನೋಡಬೇಕು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ತಾತ್ಸಾರವಿದೆ ಎಂದು ಆರೋಪಿಸಿದರು.
ಅಲ್ಲಮಪ್ರಭು ಬೆಟ್ಟದೂರು, ಮಾಜಿ ಶಾಸಕ ವೆಂಕಟಪ್ಪ ನಾಯಕ ಮಾತನಾಡಿದರು. ಕೊನೆಗೆ ಟಿಬಿ ಬೋರ್ಡ್ ಕಾರ್ಯದರ್ಶಿ ಓಆರ್‌ಕೆ ರೆಡ್ಡಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.ಮುಖಂಡರಾದ ಬೆಳಗುರ್ಕಿ ಹನುಮನಗೌಡ, ಮಹಾಂತೇಶ್ ಪಾಟೀಲ್, ಬಡಗಲಪುರ ನಾಗೇಂದ್ರ, ಹನುಮನಗೌಡ, ಶರಣಪ್ಪಗೌಡ, ತಮ್ಮನಗೌಡ, ಜೆ.ಎಂ. ವೀರಸಂಗಯ್ಯ, ಗಂಟೆ ಸೋಮೇಶೇಖರ್ ಹಾಗೂ ರಾಯಚೂರು, ಕೊಪ್ಪಳ ರೈತ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು ಇದ್ದರು.