ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಗೇಟ್ ಮುರಿದು ನೀರು ಪೋಲಾದ ಬಳಿಕವೂ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಸೆ. 4ರಂದು ಬೆಳಗ್ಗೆ 9 ಗಂಟೆಗೆ ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ಬಿಡುಗಡೆ ಮಾಡಲಾಗುತ್ತದೆ. ನದಿಯ ಸುತ್ತಮುತ್ತಲ ಜನರು ಜಾಗೃತಿಯಿಂದ ಇರುವಂತೆ ನೀರವಾರಿ ಇಲಾಖೆ ಮನವಿ ಮಾಡಿದೆ.ಈ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ನೀರಾವರಿ ಇಲಾಖೆ, ಭದ್ರಾ ಜಲಾಶಯವೂ ಭರ್ತಿಯಾಗಿರುವುದರಿಂದ ಹೊರಹರಿವು ಹೆಚ್ಚಳ ಮಾಡುವ ಮಾಹಿತಿ ನೀಡಿದ್ದಾರೆ. ಹೀಗಾಗಿ, ತುಂಗಭದ್ರಾ ಜಲಾಶಯಕ್ಕೆ ಸಹಜವಾಗಿಯೇ ಒಳಹರಿವು ಹೆಚ್ಚಳವಾಗುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಬಿಡಲು ನಿರ್ಧರಿಸಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಸಂಜೆ 6 ಗಂಟೆಗೆ 47 ಸಾವಿರ ಕ್ಯುಸೆಕ್ ಒಳಹರಿವು ಇದೆ. 1631.54 ಅಡಿ ಇದ್ದು, 99.976 ಟಿಎಂಸಿ ನೀರು ಸಂಗ್ರಹವಾಗಿದೆ.ಹೀಗಾಗಿ, ಒಳಹರಿವು ಹೆಚ್ಚಳವಾಗುವ ಪ್ರಮಾಣವನ್ನು ಸೆ. 4ರಂದು ಬೆಳಗ್ಗೆ 7 ಗಂಟೆಯ ವೇಳೆಗೆ ನೋಡಿಕೊಂಡು, ಬೆಳಗ್ಗೆ 9 ಗಂಟೆಗೆ ನದಿಗೆ 5 ಸಾವಿರದಿಂದ 50 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತದೆ ಎಂದು ನೀರಾವರಿ ಇಲಾಖೆ ಮಾಹಿತಿ ನೀಡಿದೆ.ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ರೈತರು:ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾದ್ಯಕ್ಷ ಶರಣಪ್ಪ ದೊಡ್ಡಮನಿ ನೇತೃತ್ವದಲ್ಲಿ ತುಂಗಭದ್ರಾ ಜಲಾಶಯದಲ್ಲಿ ತುಂಬಿ ನಿಂತ ಗಂಗೆಗೆ ರೈತ ಮುಖಂಡರು ಹಾಗೂ ಮಹಿಳೆಯರು ಆಗಮಿಸಿ ಜಲಾಶಯಕ್ಕೆ ಪೂಜೆ ಸಲ್ಲಿಸಿ ಮಂಗಳವಾರ ಬಾಗಿನ ಅರ್ಪಣೆ ಮಾಡಿದರು.ಡ್ಯಾಂನಲ್ಲಿ 100 ಟಿಎಂಸಿ ನೀರು ಭರ್ತಿಯಾಗುತ್ತಿದ್ದಂತೆ ರೈತರ ಖುಷಿ ಇಮ್ಮಡಿಯಾಗಿದೆ. ಡ್ಯಾಂ ನಲ್ಲಿ ನಡೆದ ಅವಘಡದಿಂದ ಆಗಿದ್ದ ಆತಂಕ ದೂರವಾಗಿದೆ. ಆದರೆ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ನೋಡಿಕೊಳ್ಳಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಹುಲ್ಲಗಮ್ಮ ಕಮಲಾಪುರ, ಹಂಪೇಶ ಹರಿಗೋಲ, ಹನುಮಂತಪ್ಪ ನಾಯಕ, ಬಸವರಾಜ ಸಣ್ಣ ಹುಲ್ಲಗಪ್ಪ ಇದ್ದರು.