ಸಾರಾಂಶ
19ನೇ ಕ್ರಸ್ಟ್‌ಗೇಟ್ ಟೆಂಡರ್ ಇಂದು ಓಪನ್, ಉಳಿದ ಗೇಟ್‌ಗಳಿಗೂ ಟೆಂಡರ್ಕೃಷ್ಣ ಲಮಾಣಿಕನ್ನಡಪ್ರಭ ವಾರ್ತೆ ಹೊಸಪೇಟೆ
ತುಂಗಭದ್ರಾ ಜಲಾಶಯ ಈ ವರ್ಷ ಸಂಪೂರ್ಣ ಭರ್ತಿ ಮಾಡುವುದರ ಬಗ್ಗೆ ತಜ್ಞರಲ್ಲೇ ಜಿಜ್ಞಾಸೆ ಉಂಟಾಗಿದ್ದು, ಜಲಾಶಯದ ಗೇಟ್ ಗಳು ಶೇ. 40ರಷ್ಟು ಮುಕ್ಕಾಗಿರುವುದರಿಂದ ಈ ಬಾರಿ ಜಲಾಶಯ ಭರ್ತಿ ಮಾಡುವುದು ಬೇಡ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಈಗ ತುಂಗಭದ್ರಾ ಮಂಡಳಿ ಈ ಬಗ್ಗೆ ಗಂಭೀರ ಆಲೋಚನೆ ಮಾಡಿದ್ದು, ಒಂದು ಬೆಳೆಗೆ ಮಾತ್ರ ನೀರು ಕೊಡಲು ಮಂಡಳಿ ಯೋಚಿಸುತ್ತಿದೆ. ಇನ್ನು ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳ ನೀರಾವರಿ ಅಧಿಕಾರಿಗಳು, ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಅಭಿಪ್ರಾಯ ಪಡೆದು ಜಲಾಶಯ ಉಳಿವಿಗಾಗಿ ನಿರ್ಣಯ ತಾಳಬೇಕಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.ರಾಯಚೂರು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ 10 ಲಕ್ಷ ಎಕರೆ ಕೃಷಿ ಜಮೀನಿಗೆ ಈ ಜಲಾಶಯದ ನೀರು ಆಸರೆಯಾಗಿದೆ. ಅಲ್ಲದೆ ಆಂಧ್ರ, ತೆಲಂಗಾಣದ 3 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶವೂ ಇದೇ ನೀರನ್ನು ಅವಲಂಬಿಸಿದೆ.ಜಲಾಶಯದ 19ನೇ ಕ್ರಸ್ಟ್ ಗೇಟ್ ಆಗಸ್ಟ್ 10ರಂದು ಕಳಚಿ ಬಿದ್ದಿತ್ತು. ಆ ಬಳಿಕ 40 ಟಿಎಂಸಿ ನೀರು ನದಿ ಪಾಲಾಗಿತ್ತು. ಈ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಕೆ ಮಾಡಲಾಗಿದೆ. ಕ್ರಸ್ಟ್ ಗೇಟ್ ನಿರ್ಮಿಸಲು ಟೆಂಡರ್ ಕರೆದಿದ್ದು, ಏ.16ರಂದು ಓಪನ್ ಆಗಲಿದೆ. ಈ ಮಧ್ಯೆ ಎನ್ ಡಿಟಿ ಸರ್ವಿಸ್ ಸಂಸ್ಥೆ ಎಲ್ಲಾ ಗೇಟ್ ಅಂದರೆ ಉಳಿದ 32 ಗೇಟ್ ಮರು ನಿರ್ಮಿಸಲು ವರದಿ ನೀಡಿದೆ. ಈ ಮಧ್ಯೆ ಪರಿಣತ ತಜ್ಞ ಕನ್ನಯ್ಯ ನಾಯ್ಡು ಕೂಡ ಜಲಾಶಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿ; ಈ ವರ್ಷ ನೀರು ಭರ್ತಿ ಮಾಡುವುದು ಬೇಡ ಎಂಬ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ, ಎಲ್ಲಾ ಗೇಟ್ ಬದಲಿಸಲು ಸೂಚಿಸಿದ್ದಾರೆ.ಈಗ ಜಲಾಶಯದ ಎಲ್ಲ ಗೇಟ್ ಬದಲಿಸಲು ಮಂಡಳಿ ನಿರ್ಧರಿಸಿದ್ದು, ಎಲ್ಲಾ ಗೇಟ್ ಗಳಿಗೂ ಟೆಂಡರ್ ಕರೆಯಬೇಕಾ? ಇಲ್ಲವೇ ಮೊದಲಿಗೆ ಹತ್ತು ಗೇಟ್ ಗಳಿಗೆ ಟೆಂಡರ್ ಕರೆಯಬೇಕಾ ಎಂಬುದರ ಬಗ್ಗೆ ಬೆಂಗಳೂರಿನಲ್ಲಿ ಏ.16ರಂದು ತುಂಗಭದ್ರಾ ಮಂಡಳಿ ಛೇರ್ಮನ್ ಎಸ್.ಎನ್. ಪಾಂಡೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ಮಂಡಳಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.