ತುಂಗಭದ್ರಾ ನದಿ ಪ್ರವಾಹ, ಪಂಪಾಸರೋವರ ಜಲಾವೃತ

| Published : Aug 03 2024, 12:36 AM IST

ಸಾರಾಂಶ

ಕಳೆದ ಒಂದು ವಾರದಿಂದ ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಪಂಪಾಸರೋವರ, ವಿಜಯಲಕ್ಷ್ಮೀ ದೇಗುಲ, ಹಳೇ ಸೇತುವೆ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳು ಜಲಾವೃತಗೊಂಡಿವೆ. ಪ್ರಸ್ತುತ ನದಿಗೆ 1 ಲಕ್ಷ 80 ಸಾವಿರ ಕ್ಯುಸೆಕ್ ನೀರು ಬಿಡಲಾಗಿದ್ದು, ಋಷಿ ಮುಖ ಪರ್ವತ ಸುತ್ತಲು ನೀರು ತುಂಬಿದೆ.

ಗಂಗಾವತಿ: ಕಳೆದ ಒಂದು ವಾರದಿಂದ ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಪಂಪಾಸರೋವರ, ವಿಜಯಲಕ್ಷ್ಮೀ ದೇಗುಲ, ಹಳೇ ಸೇತುವೆ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳು ಜಲಾವೃತಗೊಂಡಿವೆ. ಪ್ರಸ್ತುತ ನದಿಗೆ 1 ಲಕ್ಷ 80 ಸಾವಿರ ಕ್ಯುಸೆಕ್ ನೀರು ಬಿಡಲಾಗಿದ್ದು, ಋಷಿ ಮುಖ ಪರ್ವತ ಸುತ್ತಲು ನೀರು ತುಂಬಿದೆ.

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಋಷಿಮುಖ ಪರ್ವತದ ಸುತ್ತಲು ನೀರು ತುಂಬಿದ್ದು, ಈ ಸ್ಥಳದಲ್ಲಿರುವ ದೇಗುಲದ (ಅರ್ಚಕರು) ಬಾಬಾಗಳು ಸಂಕಷ್ಟಕ್ಕೆ ಸಿಲುಕುವ ಸಂಭವ ಇದೆ. ಆನಂದಗಿರಿ ಬಾಬಾ, ಹರಿದಾಸ್ ಬಾಬಾ, ನೀಲಪ್ಪ ಮತ್ತು ಶಿವಯೋಗಿ ಎನ್ನುವ ನಾಲ್ವರು ಋಷಿಮುಖ ಪರ್ವತದಲ್ಲಿಯೇ ವಾಸ ಮಾಡುತ್ತಿದ್ದಾರೆ. ಈ ಸ್ಥಳ ರಾಮ, ಲಕ್ಷ್ಮಣರು ಅನ್ವೇಷಣೆ ನಡೆಸಿದ ಸ್ಥಳ ಎಂಬ ಪ್ರತೀತಿ ಇದೆ. ಈ ಪ್ರದೇಶಕ್ಕೆ ದೇಶ-ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ಈಗ ಪ್ರವಾಹ ಬಂದ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಕೇವಲ ಬಾಬಾಗಳು ಮಾತ್ರ ಇಲ್ಲಿ ಇದ್ದು, ಅವರು ಒಂದು ತಿಂಗಳ ಕಾಲ ಆಗುವಷ್ಟು ಆಹಾರ ಧಾನ್ಯಗಳನ್ನು ಸಂಗ್ರಹಿಸಿದ್ದಾರೆ. ಒಂದು ವೇಳೆ ನದಿಗೆ 3ರಿಂದ 4 ಲಕ್ಷ ಕ್ಯುಸೆಕ್ ನೀರು ಬಂದರೆ ತೊಂದರೆಯಾಗುತ್ತಿದೆ. ಆದರೆ ಉಪಾಹಾರ ಮತ್ತು ಚಹಾ ಸೇವನೆಗೆ ಹಾಲಿನ ತೊಂದರೆಯಾಗುತ್ತಿದ್ದು, ಆಹಾರದ ಕೊರತೆ ಇಲ್ಲ ಎಂದು ಬಾಬಾಗಳು ಹೇಳುತ್ತಾರೆ.

ಹಂಪಿ ರಸ್ತೆ ಸಂಚಾರ ಸ್ಥಗಿತ: ಗಂಗಾವತಿ ಸಮೀಪದ ವಿರೂಪಾಪುರಗಡ್ಡೆಯ ಮಾರ್ಗದಿಂದ ಹಂಪಿಗೆ ಹೋಗುವ ರಸ್ತೆ ಬಂದ್‌ ಆಗಿದೆ. ನದಿಗೆ ಅಧಿಕ ನೀರು ಬಂದಿದ್ದರಿಂದ ಹಳೇ ಸೇತುವೆ ಮಧ್ಯದಲ್ಲಿ ನೀರು ಹರಿಯಲಾರಂಭಿಸಿದೆ. ಇದೇ ಮಾರ್ಗದಿಂದ ಹಂಪಿಗೆ ಪ್ರವಾಸಿಗರು ಹೋಗುತ್ತಿದ್ದರು. ಈಗ ಬಂದ್‌ ಆಗಿದ್ದರಿಂದ ಹುಲಗಿ, ಮುನಿರಾಬಾದ್ ಮತ್ತು ಕಡೇಬಾಗಿಲು ಮಾರ್ಗದಿಂದ ಹಂಪಿಗೆ ಪ್ರವಾಸಿಗರು ತೆರಳುತ್ತಿದ್ದಾರೆ. ಋಷಿಮುಖ ಪರ್ವತದಲ್ಲಿರುವ ಬಾಬಾಗಳಿಗೆ ತೊಂದರೆಯಾಗಿಲ್ಲ. ಅವರು ಒಂದು ತಿಂಗಳಿಗಾಗುವಷ್ಟು ಆಗುವ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅವರ ಜತೆ ಸಂಪರ್ಕದಲ್ಲಿದ್ದು, ಅಧಿಕ ನದಿ ಪ್ರವಾಹ ಬಂದರೆ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಗಂಗಾವತಿ ತಹಸೀಲ್ದಾರ್‌ ಯು. ನಾಗರಾಜ್ ಹೇಳುತ್ತಾರೆ.