ಕನಕಗಿರಿಯ ಲಕ್ಷ್ಮೀದೇವಿ ಕೆರೆಗೆ ತುಂಗಭದ್ರಾ ನದಿ ನೀರು

| Published : Jul 26 2024, 01:46 AM IST

ಕನಕಗಿರಿಯ ಲಕ್ಷ್ಮೀದೇವಿ ಕೆರೆಗೆ ತುಂಗಭದ್ರಾ ನದಿ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ತ್ರಿವಳಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರೆ ಭರ್ತಿಯಾದ ಹಿನ್ನೆಲೆಯಲ್ಲಿ ಚಿಕ್ಕ ಜಂತಕಲ್ ಜಾಕ್‌ವೆಲ್‌ನಿಂದ ಪಟ್ಟಣದ ಲಕ್ಷ್ಮೀದೇವಿ ಕೆರೆಗೆ ನೀರು ಸರಬರಾಜು ಆರಂಭಗೊಂಡಿದೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ತ್ರಿವಳಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರೆ ಭರ್ತಿಯಾದ ಹಿನ್ನೆಲೆಯಲ್ಲಿ ಚಿಕ್ಕ ಜಂತಕಲ್ ಜಾಕ್‌ವೆಲ್‌ನಿಂದ ಪಟ್ಟಣದ ಲಕ್ಷ್ಮೀದೇವಿ ಕೆರೆಗೆ ನೀರು ಸರಬರಾಜು ಆರಂಭಗೊಂಡಿದೆ.

ಹಲವು ತಿಂಗಳುಗಳಿಂದ ನದಿಯಲ್ಲಿ ನೀರು ಇಲ್ಲದ ಕಾರಣ ಚಿಕ್ಕಜಂತಕಲ್ ಪಂಪ್‌ಹೌಸ್‌ನಿಂದ ಕನಕಗಿರಿ ಲಕ್ಷ್ಮೀದೇವಿ ಕೆರೆಗೆ ನೀರು ಸರಬರಾಜಿಗೆ ತಡೆಯೊಡ್ಡಲಾಗಿತ್ತು. ಇದೀಗ ಟಿಬಿ ಡ್ಯಾಂ ತುಂಬಿದ್ದು, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಈ ಹಿನ್ನಲೆಯಲ್ಲಿ ಲಕ್ಷ್ಮೀದೇವಿ ಕೆರೆಗೆ ನೀರು ಸರಬರಾಜು ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಕಾಟಾಪುರ ಕೆರೆಗೂ ನೀರು ಬಿಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ವೆಂಕಟೇಶ ಗೋಡಿನಾಳ ತಿಳಿಸಿದ್ದಾರೆ.

ನದಿಯಿಂದ ಕೆರೆಗೆ ನೀರು ಹರಿಬಿಟ್ಟಿರುವ ವಿಷಯ ತಿಳಿದ ಸ್ಥಳೀಯರು, ಮುಖಂಡರು ಸ್ನೇಹಿತರೊಂದಿಗೆ ಕೆರೆಗೆ ಬಂದು ನೀರು ಸರಬರಾಜು ಆಗುವುದನ್ನು ವೀಕ್ಷಿಸಿ ಸಂತಸಪಟ್ಟರು.

ನದಿಪಾತ್ರದಲ್ಲಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳಿ:

ತುಂಗಭದ್ರಾ ಜಲಾಶಯವು ತುಂಬಿದ ಹಿನ್ನೆಲೆ ಜಲಾಶಯದಿಂದ ನದಿಗೆ ನೀರು ಬಿಡುಗಡೆಗೊಳಿಸಲಾಗಿದ್ದು, ನದಿ ಪಾತ್ರ, ದಂಡೆ ಮತ್ತು ನದಿಯ ಅಸುಪಾಸಿನಲ್ಲಿ ವಾಸಿಸುವ ಗ್ರಾಮಗಳ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಳೆನಾಡು ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದೆ. ಜು. 25ರಂದು ಒಳಹರಿವು 95,116 ಕ್ಯುಸೆಕ್ಸ್ ನೀರು ಹರಿದು ತುಂಗಭದ್ರಾ ಜಲಾಶಯಕ್ಕೆ ಬಂದಿದೆ. ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟವು 1633.00 ಅಡಿ ಇದ್ದು, ಸದ್ಯಕ್ಕೆ 1632.20 ಅಡಿಯೊಂದಿಗೆ ಜಲಾಶಯವು ಬಹುತೇಕ ತುಂಬಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆ ಇರುವ ಹಿನ್ನೆಲೆ ತುಂಗಭದ್ರಾ ನದಿಗೆ 20 ಗೇಟ್‌ಗಳ ಮೂಲಕ 2.5 ಅಡಿ ನೀರನ್ನು ಮತ್ತು 8 ಗೇಟ್‌ಗಳ ಮೂಲಕ 1.00 ಅಡಿ ಒಟ್ಟು 90318 ಕ್ಯುಸೆಕ್‌ ನೀರನ್ನು ನದಿಗೆ ಬಿಡುಗಡೆಗೊಳಿಸಲಾಗಿದೆ.

ಕಾರಣ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಅಸುಪಾಸಿನಲ್ಲಿ ವಾಸಿಸುವ ಎಲ್ಲ ಗ್ರಾಮಸ್ಥರು, ಸ್ಥಳೀಯ ನಿವಾಸಿಗಳು, ಪ್ರವಾಸಿಗರು ಮತ್ತು ಜಾನುವಾರುಗಳಿಗೆ ಮನ್ನೆಚ್ಚರಿಕಾ ಕ್ರಮಕಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಲು ವಿನಂತಿಸಲಾಗಿದೆ. ಈ ಸಂಬಂಧ ನದಿಪಾತ್ರದ ವ್ಯಾಪ್ತಿಯಲ್ಲಿನ ಎಲ್ಲ ನೀರಾವರಿ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು, ಪೊಲೀಸ್ ಇಲಾಖೆ, ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳು, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಂಡು, ನದಿ ಪಾತ್ರ ನದಿ ದಂಡೆ ಮತ್ತು ನದಿಯ ಅಸುಪಾಸಿನಲ್ಲಿ ವಾಸಿಸುವ ಗ್ರಾಮಗಳ ಗ್ರಾಮಸ್ಥರಿಗೆ ಸೂಕ್ತ ತಿಳುವಳಿಕೆ ನೀಡಿ, ನದಿ ದಂಡೆಯ ಹತ್ತಿರ ಯಾರು ಹೋಗದಂತೆ ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.ತುರ್ತು ಸಂದರ್ಭದಲ್ಲಿ ತಾಲೂಕು ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದ್ದು, ಕೊಪ್ಪಳ: 9164258531, 9900324711, ಗಂಗಾವತಿ: 9740793877, 9964221162, ಕಾರಟಗಿ: 8792429600 ಗೆ ಸಾರ್ವಜನಿಕರು ಕರೆ ಮಾಡಬಹುದು.