ಸಾರಾಂಶ
ತುಂಗಭದ್ರಾ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಜಮೀನು, ಜಾಗಗಳಲ್ಲಿ ಬದುಕು ಕಟ್ಟಿಕೊಂಡಿರುವ ರೈತರಿಗೆ ಈಗ ಅತಂತ್ರರಾಗುವ ಆತಂಕ ಎದುರಾಗಿದೆ. ಕಾರ್ಖಾನೆ ವ್ಯಾಪ್ತಿ ಜಮೀನು ಸಾಗುವಳಿ ಮಾಡುತ್ತಿರುವ ಯಾವುದೇ ಒಕ್ಕಲೆಬ್ಬಿಸಬಾರದು. ಬದಲಿಎ ಭೂಮಿ ಒಡೆತನ ನೀಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತುಂಗಾ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿರುವ ರೈತರನ್ನು ಯಾವುದೇ ಒಕ್ಕಲೆಬ್ಬಿಸಬಾರದು. ಭೂಮಿ ಒಡೆತನ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಯರಗನಾಳು, ಸದಾಶಿವಪುರ, ಮಲವಗೊಪ್ಪ ಮತ್ತು ಸುತ್ತಮುತ್ತ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.ಸಂಸದ ಬಿ.ವೈ.ರಾಘವೇಂದ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ತುಂಗಾ ಶುಗರ್ ಫ್ಯಾಕ್ಟರಿ 1950ರಲ್ಲಿ ಪ್ರಾರಂಭವಾಗಿ 1984 ರವರೆಗೆ ನಡೆದು, ಅನಂತರ 1994ರಲ್ಲಿ ದೇವಿ ಶುಗರ್ಸ್‌ನವರಿಗೆ ವರ್ಗಾಯಿಸಲಾಗಿತ್ತು. ಅವರು ಎಸ್.ಬಿ.ಎಂ.ನಲ್ಲಿ ಸಾಲ ಪಡೆದು ತೀರಿಸಲು ವಿಫಲರಾಗಿದ್ದರು. ಇದರಿಂದಾಗಿ ಮದ್ರಾಸ್ ಹೈಕೋರ್ಟ್‍ನಲ್ಲಿ ಲಿಕ್ವಿಡೇಶನ್ ಮಾಡಿ ಆದೇಶ ಕೂಡ ಕೊಡಿಸಲಾಗಿತ್ತು. ಆದರೆ, 2023ರ ಮೇ ತಿಂಗಳ 11ರಂದು ಈ ಆದೇಶವನ್ನು ಕೋರ್ಟ್ ರದ್ದುಪಡಿಸಿದೆ ಎಂದು ತಿಳಿಸಿದರು.
ಈ ಜಾಗಗಳಲ್ಲಿ ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಮನೆಗಳಿವೆ, ಸರ್ಕಾರಿ ಕಚೇರಿಗಳಿವೆ, ಶಾಲೆ ದೇವಸ್ಥಾನಗಳು ಇವೆ. ಹಕ್ಕುಪತ್ರ ಕೂಡ ಸಿಕ್ಕಿದೆ. ಕೆಲವರು ಫಾರಂ 50-53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈಗ ಇವರೆಲ್ಲರನ್ನು ಏಕಾಏಕಿ ಒಕ್ಕಲೆಬ್ಬಿಸಲಾಗುತ್ತಿದೆ. ರೈತರು, ನಿವಾಸಿಗಳು ಇದರ ವಿರುದ್ಧ ಹೋರಾಡಬೇಕಾಗಿದೆ. ನಿಮ್ಮ ಹೋರಾಟಕ್ಕೆ ಬಿಜೆಪಿ ಪಕ್ಷ ಸದಾ ನಿಲ್ಲುತ್ತದೆ ಎಂದ ಅವರು, ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಪರ್ಯಾಯ ಭೂಮಿಯನ್ನು ಸರ್ಕಾರದಿಂದಲೇ ಒದಗಿಸಲಿ ಎಂದು ಹರಿಹಾಯ್ದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್, ಪ್ರಮುಖರಾದ ಎಸ್.ದತ್ತಾತ್ರಿ, ಜಗದೀಶ್, ರತ್ನಾಕರ್ ಶೆಣೈ, ಋಷಿಕೇಶ್ ಪೈ, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ವಿನ್ಸೆಟ್ ರೋಡ್ರಿಗಸ್, ಕೃಷ್ಣಪ್ಪ, ಮಹಾದೇವ್, ನಾಗೇಂದ್ರ, ಗಿರೀಶ್, ಯತೀರಾಜ್ ಮತ್ತಿತರರು ಇದ್ದರು.
- - - -26ಎಸ್‌ಎಂಜಿಕೆಪಿ06:ಪ್ರತಿಭಟನೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.