ತುಂಗಭದ್ರಾ ನೀರು ಸ್ಥಗಿತ, ಮುಳಗುಂದಕ್ಕೆ ಕೊಳವೆಬಾವಿ ನೀರೇ ಗತಿ

| Published : Feb 28 2024, 02:31 AM IST

ತುಂಗಭದ್ರಾ ನೀರು ಸ್ಥಗಿತ, ಮುಳಗುಂದಕ್ಕೆ ಕೊಳವೆಬಾವಿ ನೀರೇ ಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಳಗುಂದ ಪಟ್ಟಣಕ್ಕೆ ಕಳೆದ ೫ ವರ್ಷಗಳಿಂದ ತುಂಗಭದ್ರಾ ನದಿ ನೀರು ಸ್ಥಗಿತಗೊಂಡಿದ್ದು, ಇಲ್ಲಿನ ಜನತೆಗೆ ಕೊಳೆವೆ ಬಾವಿಯ ಫ್ಲೋರೈಡ್ ನೀರೇ ಗತಿಯಾಗಿದೆ. ಪ್ರಸಕ್ತ ವರ್ಷ ಮಳೆ ಅಭಾವದಿಂದ ಬೇಸಿಗೆ ಪೂರ್ವದಲ್ಲಿಯೇ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದ್ದು, ಬೇಸಿಗೆ ದಿನಗಳನ್ನು ಕಳೆಯುವುದು ಇನ್ನು ಕಷ್ಟವಾಗಲಿದೆ.

ಮಹೇಶ ಛಬ್ಬಿಗದಗ: ತಾಲೂಕಿನ ಮುಳಗುಂದ ಪಟ್ಟಣಕ್ಕೆ ಕಳೆದ ೫ ವರ್ಷಗಳಿಂದ ತುಂಗಭದ್ರಾ ನದಿ ನೀರು ಸ್ಥಗಿತಗೊಂಡಿದ್ದು, ಇಲ್ಲಿನ ಜನತೆಗೆ ಕೊಳೆವೆ ಬಾವಿಯ ಫ್ಲೋರೈಡ್ ನೀರೇ ಗತಿಯಾಗಿದೆ. ಪ್ರಸಕ್ತ ವರ್ಷ ಮಳೆ ಅಭಾವದಿಂದ ಬೇಸಿಗೆ ಪೂರ್ವದಲ್ಲಿಯೇ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದ್ದು, ಬೇಸಿಗೆ ದಿನಗಳನ್ನು ಕಳೆಯುವುದು ಇನ್ನು ಕಷ್ಟವಾಗಲಿದೆ.

ಗದಗ ವಿಧಾನಸಭಾ ಕ್ಷೇತ್ರದಲ್ಲಿ ಗದಗ ಹೊರತುಪಡಿಸಿದರೇ ದೊಡ್ಡ ಪಟ್ಟಣವಾಗಿರುವ ಮುಳಗುಂದದಲ್ಲಿ ನೀರಿನ ಅಭಾವ ತೀವ್ರವಾಗಿದೆ.

೫ ವರ್ಷದಿಂದ ಸ್ಥಗಿತ: ಪಟ್ಟಣದ ಜನತೆ ೬೦ ಕಿಮೀ ದೂರದ ಹೊಳೆ ಇಟಗಿ ಜಾಕ್‌ವೆಲ್ ಮೂಲಕ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪಡೆಯುತ್ತಿದ್ದಾರೆ. ಆದರೆ ತುಂಗಭದ್ರಾ ನದಿ ನೀರು ಬಳಸುತ್ತಿರುವ ಗ್ರಾಮಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಇದರಿಂದ ನಿರ್ವಹಣೆ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ಕಳೆದ ೫ ವರ್ಷದಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೆ ಅವಲಂಬಿಸಿದೆ. ಪ್ರಸಕ್ತ ವರ್ಷ ಮಳೆ ಕೊರತೆ ಉಂಟಾಗಿದ್ದು, ಬೇಸಿಗೆ ಪೂರ್ವದಲ್ಲೇ ಅಂತರ್ಜಲ ಮಟ್ಟ ಕುಸಿತವಾಗಿದ್ದು, ಬೇಸಿಗೆಯಲ್ಲಿ ಹೆಚ್ಚಿನ ಆತಂಕ ಎದುರಾಗಲಿದೆ.

೨೦೦೯ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಶಿರಹಟ್ಟಿ, ಮುಳಗುಂದ ಪಟ್ಟಣ ಪಂಚಾಯ್ತಿಗಳ ಸಹಯೋಗದಲ್ಲಿ ೩೩.೫೦ ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿತ್ತು. ೨೦೧೫ರಲ್ಲಿ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ನದಿ ನೀರು ಸರಬರಾಜಿಗೆ ಚಾಲನೆ ನೀಡಿದ್ದರು. ಆರಂಭದಲ್ಲಿ ನಿರ್ವಹಣೆ ಉತ್ತಮವಾಗಿ ನಡೆದಿತ್ತು. ಆದರೆ ಮಾರ್ಗ ಮಧ್ಯೆ ನೀರು ಬಳಸುವ ಸುಗ್ನಳ್ಳಿ, ಬನ್ನಿಕೊಪ್ಪ, ಬೆಳ್ಳಟ್ಟಿ, ಹೊಸೂರ, ಛಬ್ಬಿ, ರಣತೂರ ಗ್ರಾಮಗಳು ತಮ್ಮ ಪಾಲಿನ ನೀರಿನ ವೆಚ್ಚವನ್ನು 2016 ರಿಂದ 2020 ರ ವರೆಗೆ ಪಾವತಿಸಲೇ ಇಲ್ಲ. ಸುಮಾರು ೧,೨೩ಕೋಟಿ ರು. ಬಾಕಿ ಉಳಿಸಿಕೊಂಡಿವೆ. ಹೀಗಾಗಿ ನಿರ್ವಹಣೆಗೆ ಹಣವಿಲ್ಲದೆ ನೀರು ಸರಬರಾಜು ಸ್ಥಗಿತಗೊಂಡಿದೆ.

೫ ವರ್ಷದಿಂದ ನದಿ ನೀರು ಸರಬರಾಜು ಸ್ಥಗಿತಗೊಂಡಿದೆ, ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ನಿರ್ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದು ಪ್ರಯೋಜನಕ್ಕೆ ಬಾರದಾಗಿದೆ. ಕೂಡಲೆ ಸಮಸ್ಯೆ ಪರಿಹರಿಸಿ ನದಿ ನೀರು ಕೊಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಯಂತ್ರಗಳು ಹಾಳಾಗಿವೆ: ತುಂಗಭದ್ರಾ ನದಿ ನೀರು ಪೂರೈಕೆ ಸ್ಥಗಿತವಾದ ಬಳಿಕ ನಿರ್ವಹಣೆ ಇಲ್ಲದೇ ಯಂತ್ರಗಳು ಹಾಳಾಗಿವೆ. ಶಿರಹಟ್ಟಿ- ಬೆಳ್ಳಟ್ಟಿ ನಡುವೆ ರಸ್ತೆ ಕಾಮಗಾರಿ ವೇಳೆ ಪೈಪ್‌ ಒಡೆದಿದೆ. ಇದೀಗ ಅಮೃತ 2.0 ಯೋಜನೆಯಡಿ ಅನುದಾನ ಬಿಡುಗಡೆಯಾಗಿದ್ದು, ಪೈಪ್‌, ಯಂತ್ರಗಳ ದುರಸ್ತಿ ಕಾರ್ಯ ಕೈಗೊಂಡಿದ್ದು ಇನ್ನೆರಡು ತಿಂಗಳಲ್ಲಿ ನದಿ ನೀರು ಪೂರೈಕೆ ಆಗಲಿದೆ ಎಂದು ಮುಖ್ಯಾಧಿಕಾರಿ ಭರವಸೆ ನೀಡುತ್ತಾರೆ.೫ ದಿನಗಳಿಗೊಮ್ಮೆ ನೀರು ಪೂರೈಕೆ: ಪಟ್ಟಣದಲ್ಲಿ ಮೊದಲಿಗೆ ಕೊಳವೆ ಬಾವಿಗಳ ಮೂಲಕ ೩ ಅಥವಾ ೪ ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಸದ್ಯ ಮಳೆ ಅಭಾವದಿಂದ ಅಂತರ್ಜಲ ಮಟ್ಟ ಕುಸಿತವಾದ ಹಿನ್ನೆಲೆ ೫ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಮುಂದಿನ ಮೂರ್ನಾಲ್ಕು ತಿಂಗಳ ಬೇಸಿಗೆ ಕಳೆಯುವುದು ಇನ್ನು ಕಷ್ಟವಾಗಲಿದೆ.

ಮುಳಗುಂದ ಪಟ್ಟಣದಲ್ಲಿ ನೀರಿನ ಕೊರತೆಯಾಗದಂತೆ ಬಂದ್ ಆಗಿದ್ದ ೧೪ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿಸಿ ನೀರು ಪೂರೈಕೆ ಮಾಡಲಾಗುತ್ತದೆ. ಪಟ್ಟಣಕ್ಕೆ ಕುಡಿಯುವ ನೀರಿನ ಕೊರತೆಯಾದಂತೆ ಕ್ರಮ ವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಮಂಜುನಾಥ ಗುಳೇದ ಹೇಳುತ್ತಾರೆ.