ನವದೆಹಲಿ : ಆಗುಂಬೆ ಘಾಟ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-169ಎ ರಸ್ತೆಯನ್ನು ಎರಡು ಲೈನ್ ರಸ್ತೆ, ಎರಡೂ ಬದಿ ಪಾದಚಾರಿ ಮಾರ್ಗ ಸಹಿತ ಮೇಲ್ದರ್ಜೆಗೇರಿಸುವುದರ ಜೊತೆಗೆ ಸುರಂಗ ಮಾರ್ಗದ ಕಾರ್ಯಸಾಧ್ಯತೆ ಕುರಿತ ವಿವರವಾದ ಯೋಜನಾ ವರದಿ ತಯಾರಿಸಲು ಕೇಂದ್ರ ಭೂ ಸಾರಿಗೆ ಇಲಾಖೆ ಟೆಂಡರ್ ಆಹ್ವಾನಿಸಿದೆ.
6 ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ
ಕಾರ್ಯಸಾಧ್ಯತಾ ಅಧ್ಯಯನದೊಂದಿಗೆ ಮುಂದಿನ 6 ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿದೆ. ಇದಕ್ಕಾಗಿ 2.33 ಕೋಟಿ ರೂ.ಮೀಸಲಿಡಲಾಗಿದೆ. ಸುರಂಗ ವಿನ್ಯಾಸ ತಜ್ಞರು ಮತ್ತು ಹಿರಿಯ ಭೂ-ಭೌತಶಾಸ್ತ್ರಜ್ಞರ ತೊಡಗಿಸಿಕೊಳ್ಳುವಿಕೆ, ಆಗುಂಬೆ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಆಯ್ಕೆಯ ಕಾರ್ಯಸಾಧ್ಯತೆ ಪರೀಕ್ಷೆ, ಮೀಸಲಾದ ಬಜೆಟ್ ನಿಬಂಧನೆಗಳೊಂದಿಗೆ ವಿವರವಾದ ಭೂ-ತಾಂತ್ರಿಕ ಪರಿಶೀಲನೆಗಳು ಡಿಪಿಆರ್ ವ್ಯಾಪ್ತಿಯಲ್ಲಿರಲಿವೆ.
ಮಾಹಿತಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ
ದೆಹಲಿಯಲ್ಲಿ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಈ ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿಯಿಂದ ಮಲೆನಾಡು -ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಹೊಸ ದಿಕ್ಕು ಲಭ್ಯವಾಗಲಿದೆ. ಸ್ಥಳೀಯ ನಿವಾಸಿಗಳು, ರೈತರು, ಅಕ್ಕಪಕ್ಕದ ಜಿಲ್ಲೆಗಳು, ಪ್ರವಾಸೋದ್ಯಮ ಹಾಗೂ ತುರ್ತು ಸೇವೆಗಳಿಗೆ ಗಣನೀಯ ಲಾಭವಾಗಲಿದೆ ಎಂದು ಹೇಳಿದರು.
ಪರಿಸರ ಸೂಕ್ಷ್ಮ ಪ್ರದೇಶವಾಗಿರುವುದರ ಜೊತೆಗೆ ಅಪಾಯಕಾರಿ ಹಾಗೂ ಅಪಘಾತಗಳಿಗೆ ಹೆಸರಾದ ಆಗುಂಬೆ ಘಾಟ್ ರಸ್ತೆಯ ಸುರಕ್ಷತೆ ಹೆಚ್ಚಿಸುವುದು, ಪಶ್ಚಿಮ ಘಟ್ಟ ಪ್ರದೇಶದ ಪ್ರಕೃತಿ ಸಂವೇದನಾಶೀಲತೆಗೆ ಗೌರವ ನೀಡುತ್ತಲೇ ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿ ಕೈಗೊಳ್ಳುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದರು.
ಮುಂದಿನ ಹಂತಗಳಲ್ಲಿ ಯೋಜನೆ ಸುಗಮವಾಗಿ ಸಾಗಲು ಕೇಂದ್ರದೊಂದಿಗೆ ನಿರಂತರ ಸಂಯೋಜನೆ ಮುಂದುವರಿಸುವುದಾಗಿ ಅವರು ಹೇಳಿದ್ದು, ಭೂಸ್ವಾಧೀನ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.