ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಭವಿಷ್ಯದ ಎಲ್ಲಾ ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ (ಮೆಟ್ರೋ ಎಲಿವೆಟೆಡ್‌ನ ಕೆಳ ಹಂತದ ರಸ್ತೆ) ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಮೈದಾನದಲ್ಲಿ ಭಾನುವಾರ ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರದ ಜನರ ಅಹವಾಲು ಸ್ವೀಕರಿಸುವ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಶವಂತಪುರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ರಸ್ತೆ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಸಾಧ್ಯಾಸಾಧ್ಯತೆ ವರದಿ ಸಿದ್ಧಪಡಿಸಲಾಗುತ್ತಿದೆ. ಸುಮ್ಮನಹಳ್ಳಿ, ಗೊರಗೊಂಟೆಪಾಳ್ಯ ಸೇರಿದಂತೆ ಇತರ ಕಡೆಗಳಲ್ಲಿ ಈ ಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಸದ್ಯದಲ್ಲೇ ಪಾಲಿಕೆ ಬಜೆಟ್ ಮಂಡನೆಯಾಗಲಿದೆ. ಬೆಂಗಳೂರಿನ ಹೊಸ ಯೋಜನೆಗಳಿಗೆ ಸಂಪನ್ಮೂಲ ಕ್ರೋಢಿಕರಿಸಲು ನಮ್ಮದೇ ಆದ ಯೋಜನೆಗಳಿವೆ ಎಂದರು.
ಈವರೆಗೆ ನಗರದ 12 ಕ್ಷೇತ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಿ 20 ಸಾವಿರ ಅಹವಾಲು ಸ್ವೀಕರಿಸಿದ್ದೇವೆ. ಮುಖ್ಯಮಂತ್ರಿ ಕೂಡ ಎರಡು ಬಾರಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರ ಕಾರ್ಯಕ್ರಮದಲ್ಲೂ ಸಾವಿರಾರು ಮಂದಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಅರ್ಜಿಗಳ ವಿಲೇವಾರಿಗೆ ಪ್ರತ್ಯೇಕವಾಗಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿರುವ ಎಲ್ಲಾ ಆಸ್ತಿಗಳನ್ನು ಸಮೀಕ್ಷೆ ಮಾಡಿಸಿ, ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ದಾಖಲೆಗಳನ್ನು ತಲುಪಿಸುವ ‘ನಮ್ಮ ಸ್ವತ್ತು’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇತ್ತೀಚೆಗೆ ಆಸ್ತಿ ದಾಖಲೆ ಪರಿಶೀಲನೆಯ ಪ್ರಾಯೋಗಿಕ ಕಾರ್ಯಕ್ರಮವನ್ನು ನಿಮ್ಮದೇ ಕ್ಷೇತ್ರದಲ್ಲಿ ಮಾಡಲಾಗಿದೆ.
ಈ ವೇಳೆ ಕೆಲವು ಅಧಿಕಾರಿಗಳು ದಾಖಲೆ ತಿದ್ದಲು ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸ್ಥಳೀಯ ಶಾಸಕರಾದ ಮುನಿರತ್ನ, ಎಸ್.ಟಿ ಸೋಮಶೇಖರ್, ಸಂಸದ ಡಿ.ಕೆ ಸುರೇಶ್, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಡಿಎ ಆಯುಕ್ತ ಜಯರಾಮ್, ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್, ವಲಯ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಉಪಸ್ಥಿತರಿದ್ದರು.ನಿಮ್ಮ ಜತೆಗೆ ನಮ್ಮ ಸರ್ಕಾರವಿದೆ: ಡಿಕೇಶಿ
ಗಂಡ, ಮಕ್ಕಳಿಲ್ಲ, ನಾನು ಒಬ್ಬಂಟಿ. ರೇಷನ್ ಕಾರ್ಡ್ ಇಲ್ಲ, ಮನೆ ಕಟ್ಟುವುದಕ್ಕೆ ಬ್ಯಾಂಕ್ ಸಾಲ ಕೊಡಿಸಿ, ಕಾಲುಗಳಿಲ್ಲ ಪೆಟ್ಟಿ ಅಂಗಡಿ ಹಾಕಿಕೊಂಡು ಜೀವನ ಮಾಡುತ್ತೇವೆ. ಹೀಗೆ, ನೂರಾರು ನೋವಿನ ಕಥೆಗಳನ್ನು ಹೊತ್ತು ತಂದ ಶ್ರೀಸಾಮಾನ್ಯರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಿಮ್ಮ ಜತೆಗೆ ನಮ್ಮ ಸರ್ಕಾರ ಇದೆ ಎಂಬ ಸಮಾಧಾನ ನೀಡಿದರು. ನೂರಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಕೆಲಸ ಮಾಡಿದರು.
ಹೀಗೆ, ಅನೇಕ ಭಾವುಕ ಕ್ಷಣಗಳಿಗೆ ಭಾನುವಾರ ಬೆಂಗಳೂರು ವಿಶ್ವ ವಿದ್ಯಾಲಯದ ಮೈದಾನದಲ್ಲಿ ನಡೆದ ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರದ ಜನರ ಹಲವಾಲು ಸ್ವೀಕರಿಸುವ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಸಾಕ್ಷಿಯಾಯಿತು.
ಗಂಡ, ಮಕ್ಕಳಿಲ್ಲ, ನಾನು ಒಬ್ಬಂಟಿ. ರೇಷನ್ ಕಾರ್ಡ್ ಸಹ ಇಲ್ಲ, ಎಂದು ಆರ್.ಆರ್.ನಗರದ ಸಿದ್ದಲಿಂಗಮ್ಮ ಕಣ್ಣೀರಿಟ್ಟರು. ಅದಕ್ಕೆ ಡಿ.ಕೆ.ಶಿವಕುಮಾರ್ ನಿಮ್ಮ ಜೊತೆಗೆ ನಮ್ಮ ಸರ್ಕಾರ ಇದೆ. ನೀವು ಒಬ್ಬಂಟಿ ಅಲ್ಲ ಎಂದು ಸಮಾಧಾನಪಡಿಸಿದರು.
ಕಳೆದ 30 ವರ್ಷದಿಂದ ಬೆಂಗಳೂರಿನಲ್ಲಿ ದುಡಿದು ಸೈಟ್ ತೆಗೆದುಕೊಂಡಿದ್ದೇವೆ. ಮನೆ ಕಟ್ಟುವುದಕ್ಕೆ ಯಾವುದಾದರೂ ಬ್ಯಾಂಕ್ ನಲ್ಲಿ ಸಾಲ ಕೊಡಿಸಿ ಎಂದು ಲಗ್ಗೆರೆಯ ಲೀಲಾವತಿ ಮನವಿ ಮಾಡಿದರು. ಒಳ್ಳೆಯ ಮನೆ ಕಟ್ಟಿ, ಎಲ್ಲಾದರೂ ಸಾಲ ಸೌಲಭ್ಯ ದೊರೆಯುವಂತೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಎರಡು ಕಾಲುಗಳಿಲ್ಲದ ರಾಜಪ್ಪ ಪೆಟ್ಟಿಗೆ ಅಂಗಡಿ ಹಾಕಿಕೊಡಿ, ಏನಾದರೂ ವ್ಯಾಪಾರ ಮಾಡಿಕೊಂಡು ಬದುಕುತ್ತೇನೆ ಎಂದು ಮನವಿ ಮಾಡಿದರು. ಮನವಿಗೆ ತಕ್ಷಣ ಸ್ಪಂದಿಸಿ ಅಂಗಡಿ ಹಾಕಿಕೊಡುವುದಾಗಿ ಹೇಳಿದರು.
ಪೀಣ್ಯದಲ್ಲಿ ಜೋಪಡಿ ಕಟ್ಟಿಕೊಂಡು ಜೀವನ ಮಾಡುತ್ತಿದ್ದೇವೆ. ಜಾಗದ ಮಾಲೀಕರಿಗೆ ತಿಂಗಳಿಗೆ ಒಂದು ಸಾವಿರ ರು. ಕೊಡಬೇಕಾಗಿದೆ. ಮನೆ ಕೊಡಿಸುವಂತೆ ರೇಣುಕಾ, ರಂಗಮ್ಮ, ಗುರುಬಾಯಿ, ಕವಿತಾ, ಶಾಂತಮ್ಮ ಮನವಿ ಮಾಡಿದರು. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಅರ್ಜಿ ಸಲ್ಲಿಸಿ, ಖುದ್ದಾಗಿ ನಾನೇ ಮನೆ ಸಿಗುವಂತೆ ವ್ಯವಸ್ಥೆ ಮಾಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.3 ಸಾವಿರಕ್ಕೂ ಅಧಿಕ ಅರ್ಜಿ
ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರದ ಜನರ ಹಲವಾಲು ಸ್ವೀಕರಿಸುವ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಆಹವಾಲುಗಳನ್ನು ಸ್ವೀಕರಿಸಲಾಯಿತು. ಈ ಪೈಕಿ ನೂರಾರು ಆಹವಾಲುಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಸಂಸದ ಡಿ.ಕೆ.ಸುರೇಶ್ ಸ್ಥಳದಲ್ಲಿಯೇ ಪರಿಹಾರ ಒದಗಿಸಿಕೊಟ್ಟರು.ಧಾರಾವಾಡದಿಂದ ಬಂದ ಮಹಿಳೆ
ತರಕಾರಿ ವ್ಯಾಪಾರ ಮಾಡುವ ಮಂಜುಳಾ ಎಂಬುವವರು ನಾಲ್ಕು ಪುಟ್ಟ ಮಕ್ಕಳ ಜತೆಗೆ ಧಾರವಾಡದಿಂದ ಬೆಂಗಳೂರಿಗೆ ಆಗಮಿಸಿ ತಮ್ಮ ಸಮಸ್ಯೆ ಹೇಳಿಕೊಂಡರು. ಸಮಸ್ಯೆ ಪರಿಹಾರಕ್ಕೆ ಧಾರವಾಡ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದರು.ಮಾತುಬಾರದ ಸುನೀತಾಗೆ
ಗೃಹಲಕ್ಷ್ಮೀ ಭಾಗ್ಯ: ಮಾತು ಬಾರದ ಸುನೀತಾ ಬಾಯಿ ತನ್ನ ಮಗಳು ಅರ್ಪಿತಾ ಮೂಲಕ ತನ್ನ ಸಮಸ್ಯೆ ಹೇಳಿಕೊಂಡರು. ಮಗುವಿನ ವಾಕ್ಚಾತುರ್ಯ ಮೆಚ್ಚಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಸುನೀತಾ ಬಾಯಿ ಅವರಿಗೆ ಪಿಂಚಣಿ ಹಣ ಮತ್ತು ಗೃಹಲಕ್ಷ್ಮೀ ಸೌಲಭ್ಯ ದೊರೆಯುವಂತೆ ಮಾಡಲು ಅಧಿಕಾರಿಗಳಿಗೆ ಆದೇಶಿಸಿದರು.
ಡಿಕೆಶಿಗೆ ಬೆಂಗಳೂರಿನ ಬಗ್ಗೆ ದೂರದೃಷ್ಟಿ ಇದೆ: ಮುನಿರತ್ನ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಅಭಿವೃದ್ಧಿಯ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೂರದೃಷ್ಟಿ ಹೊಂದಿದ್ದು, ನಗರದ ಬೆಳವಣಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ.
ಭಾನುವಾರ ಆಯೋಜಿಸಿದ್ದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಬೆಳವಣಿಗೆಯನ್ನು ತುಂಬಾ ಹತ್ತಿರದಿಂದ ಉಪ ಮುಖ್ಯಮಂತ್ರಿಗಳು ನೋಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಡಿಸಿಎಂ ಕೊಡುಗೆ ನೀಡುವುದರಲ್ಲಿ ಅನುಮಾನವಿಲ್ಲ ಎಂದರು.
ಸಾರ್ವಜನಿಕರ ಮನೆ ಬಾಗಿಲಿನಲ್ಲಿ ಸಮಸ್ಯೆ ಪರಿಹಾರಿಸುವ ಉತ್ತಮವಾದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ. ನಿಮ್ಮ ಸಮಸ್ಯೆಗಳನ್ನು ಉಪ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿ, ಅವರು ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ದೇವರು ಅಧಿಕಾರಿಗಳ ರೂಪದಲ್ಲಿ ಬಂದು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಧಿಕಾರಿಗಳು ಸರಿಯಾದ ರೀತಿಯಿಂದ ಕಾರ್ಯನಿರ್ವಹಿಸಿದರೆ ಜನಪ್ರತಿನಿದಿಗಳ ಬಳಿ ಸಾರ್ವಜನಿಕರು ಬರುವುದಿಲ್ಲ ಮತ್ತು ನೆನಪಿಸಿಕೊಳ್ಳುವುದಿಲ್ಲ ಎಂದರು.