ಸುರಂಗ ರೈಲು ಅಪಘಾತ ರಕ್ಷಣಾ ಅಣಕು ಕಾರ್ಯಾಚರಣೆ

| Published : Oct 02 2024, 01:03 AM IST

ಸಾರಾಂಶ

ಸುರಂಗದಲ್ಲಿ ರೈಲ್ವೇ ಅಪಘಾತ, ನುಜ್ಜುಗುಜ್ಜಾದ ಬೋಗಿಗಳ ಒಳಗೆ ನೆರವಿಗಾಗಿ ಪ್ರಯಾಣಿಕರ ಚೀರಾಟ, ಅಪಘಾತ ನಂತರದ ಒಂದು ಗಂಟೆ ಗೋಲ್ಡನ್‌ ಅವರ್‌ ರಕ್ಷಣೆ ಕಾರ್ಯಾಚರಣೆಯ ಧಾವಂತದಲ್ಲಿ ಆರ್‌ಪಿಎಫ್‌ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್‌ ಸಿಬ್ಬಂದಿ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸುರಂಗದಲ್ಲಿ ರೈಲ್ವೇ ಅಪಘಾತ, ನುಜ್ಜುಗುಜ್ಜಾದ ಬೋಗಿಗಳ ಒಳಗೆ ನೆರವಿಗಾಗಿ ಪ್ರಯಾಣಿಕರ ಚೀರಾಟ, ಅಪಘಾತ ನಂತರದ ಒಂದು ಗಂಟೆ ಗೋಲ್ಡನ್‌ ಅವರ್‌ ರಕ್ಷಣೆ ಕಾರ್ಯಾಚರಣೆಯ ಧಾವಂತದಲ್ಲಿ ಆರ್‌ಪಿಎಫ್‌ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್‌ ಸಿಬ್ಬಂದಿ.

ಹೆಜ್ಜಾಲದಲ್ಲಿ ಇರುವ ರೈಲ್ವೇ ಅಪಘಾತ ತರಬೇತಿ ನೀಡುವ ದೇಶದ ಏಕೈಕ ಕೇಂದ್ರವಾದ ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆಯಿಂದ (ಐಆರ್‌ಐಡಿಎಂ) ಮಂಗಳವಾರ ಪ್ರಥಮ ಬಾರಿಗೆ ನಡೆದ ಸುರಂಗ ರೈಲು ಅಪಘಾತ ರಕ್ಷಣಾ ಅಣಕು ಕಾರ್ಯಾಚರಣೆ ಹೀಗಿತ್ತು.

ಇದಕ್ಕಾಗಿ ನೈಜತೆ, ಸವಾಲಿನಿಂದ ಕೂಡಿದ್ದ ಅಪಘಾತದ ಸನ್ನಿವೇಶ ಸೃಷ್ಟಿಸಲಾಗಿತ್ತು. ನಾಲ್ಕು ರೈಲ್ವೆ ಬೋಗಿ ಸಾಮರ್ಥ್ಯದ ಸುರಂಗವನ್ನು ನಿರ್ಮಿಸಿ ರೈಲ್ವೆ ಬೋಗಿಗಳು ಅಪಘಾತದಲ್ಲಿ ಬಿದ್ದಿರುವಂತೆ ಮಾಡಲಾಗಿತ್ತು.

ಸೈರನ್‌ ಮೊಳಗಿಸಿ ಅಪಘಾತವಾದ ಸೂಚನೆ ನೀಡುತ್ತಿದ್ದಂತೆ ವಿವಿಧ ರೈಲ್ವೆ ವಲಯಗಳ ಆರ್‌ಪಿಎಫ್‌ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್‌ 100 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಕಿಟಕಿ ಮುರಿದು, ರೂಫ್‌ಟಾಪ್‌ ಹಾಗೂ ಹಿಂಬಾಗವನ್ನು ವೆಲ್ಡಿಂಗ್‌ನಿಂದ ಕೊರೆದು ರೈಲಿನ ಒಳನುಗ್ಗಿ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ನಡೆಸಿದರು.

60-70 ಕೆಜಿ ತೂಕದ ಮನುಷ್ಯಾಕೃತಿಯ ಬೊಂಬೆಗಳನ್ನು ರೂಪಿಸಿಕೊಳ್ಳಲಾಗಿತ್ತು. ಅಲ್ಲದೆ ಕೆಲವರು ನಿಜವಾಗಿ ಕೈಕಾಲು ಮುರಿದು ಗಾಯಗೊಂಡಂತೆ ಬೋಗಿಗಳಲ್ಲಿ ಬಿದ್ದಿದ್ದರು. ಇವರು ಸಹಾಯಕ್ಕಾಗಿ ಯಾಚಿಸುತ್ತಿದ್ದರು. ಗಾಯಗೊಂಡರವನ್ನು ರಕ್ಷಿಸಿ ಕಿಟಕಿ ಮೂಲಕ ಹೊರತೆಗೆಯುವ, ಸ್ಟ್ರೆಚ್ಚರ್‌ನಲ್ಲಿಟ್ಟು ಹಗ್ಗದ ಮೂಲಕ ಸುರಂಗದ ಮೇಲ್ಭಾಗಕ್ಕೆ ರವಾನಿಸುವ ಕೆಲಸ ಮಾಡಿದರು. ಸಿಬ್ಬಂದಿ ಮೊದಲ 1 ಗಂಟೆಯಲ್ಲಿ ಈ ಅಣಕು ಕಾರ್ಯಾಚರಣೆಯಲ್ಲಿ ಪ್ರಯಾಣಿಕರಾಗಿದ್ದ 145 ಜನರನ್ನುರಕ್ಷಿಸಿ ತೋರಿಸಿದರು.

ಅಣಕು ಕಾರ್ಯಾಚರಣೆ ಬಳಿಕ ಮಾತನಾಡಿದ ಐಆರ್‌ಐಡಿಎಂ ನಿರ್ದೇಶಕ ವಿವಿಎಸ್ ಶ್ರೀನಿವಾಸ್, ಇದೇ ಮೊದಲ ಬಾರಿಗೆ ಸುರಂಗ ಅಪಘಾತ ರಕ್ಷಣಾ ಅಣಕು ಕಾರ್ಯಾಚರಣೆ ಮಾಡಲಾಗಿದೆ. ಸೆ.16ರಿಂದ ಆರಂಭವಾದ 3 ವಾರಗಳ ತರಬೇತಿ ಪ್ರಯುಕ್ತ ಈ ಅಣಕು ಪ್ರದರ್ಶನ ಮಾಡಲಾಗಿದೆ. ಅಪಘಾತ ಸಂಭವಿಸಿದ ವೇಳೆ ಸಿಬ್ಬಂದಿ ಗೊಂದಲಕ್ಕೆ ಒಳಗಾಗದೆ ವ್ಯವಸ್ಥಿಕವಾಗಿ ಕಾರ್ಯಾಚರಣೆ ಮಾಡಲು ಈ ತರಬೇತಿ ಅನುಕೂಲವಾಗುತ್ತದೆ ಎಂದರು.

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನಪುರಿಯಾ, ಆರ್‌ಪಿಎಫ್‌ ಮುಖ್ಯ ಭದ್ರತಾ ಆಯುಕ್ತ ಸಂದೀಪ್ ರವಿವಂಶಿ ಇದ್ದರು.