ತುಪ್ಪರಿಹಳ್ಳ, ಬೆಣ್ಣಿಹಳ್ಳ ಪ್ರವಾಹ, ಜಾಗೃತಿ ಮೂಡಿಸಿ

| Published : Jun 15 2024, 01:05 AM IST

ಸಾರಾಂಶ

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಳವಾಗುವ ಸಾಧ್ಯತೆ ಇದೆ. ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಪ್ರವಾಹ ಉಂಟುಮಾಡಬಹುದು. ತಹಸೀಲ್ದಾರ್‌ರು ಗ್ರಾಮಗಳಿಗೆ ಭೇಟಿ ನೀಡಿ, ಪ್ರವಾಹದಿಂದ ಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು.

ಧಾರವಾಡ:

ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಹರಿಯುವ ಮಾರ್ಗದ ಗ್ರಾಮಗಳಲ್ಲಿ ಪ್ರವಾಹದ ಕುರಿತು ಜಾಗೃತಿ ಮೂಡಿಸಬೇಕು ಮತ್ತು ಪ್ರವಾಹ ಉಂಟಾದಲ್ಲಿ ಜನ, ಜಾನುವಾರು ರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿದ ಅವರು, ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಳವಾಗುವ ಸಾಧ್ಯತೆ ಇದೆ. ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಪ್ರವಾಹ ಉಂಟುಮಾಡಬಹುದು. ತಹಸೀಲ್ದಾರ್‌ರು ಗ್ರಾಮಗಳಿಗೆ ಭೇಟಿ ನೀಡಿ, ಪ್ರವಾಹದಿಂದ ಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದರು.

ಇನ್ನು, ಆರೋಗ್ಯ ಇಲಾಖೆಯು ಗ್ರಾಮಗಳಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಜೂ. 12ರ ವರೆಗೆ 1.17 ಲಕ್ಷ ಹೆಕ್ಟೇರ್‌ ಭೂಮಿ ಬಿತ್ತನೆ ಆಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಆಗಿರುವ ಬೆಳೆಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ಅಗತ್ಯ ಸಲಹೆಗಳನ್ನು ರೈತರಿಗೆ ನೀಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಉದ್ದು 520.4 ಕ್ವಿಂಟಲ್ ದಷ್ಟು ದಾಸ್ತಾನಿದೆ. ಈಗಾಗಲೇ 491.58 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, 28.55 ಕ್ವಿಂಟಲ್ ದಷ್ಟು ಲಭ್ಯವಿದೆ. ಹೆಸರು 1,166 ಕ್ವಿಂಟಲ್ ದಾಸ್ತಾನಿದ್ದು, 971.55 ಕ್ವಿಂಟಲ್ ಬೀಜ ವಿತರಣೆಯಾಗಿದೆ. ಇನ್ನು 195.25 ಕ್ವಿಂಟಲ್ ಲಭ್ಯವಿದೆ. ಶೇಂಗಾ 1,479 ಕ್ವಿಂಟಲ್ ದಾಸ್ತಾನಿದ್ದು, 1,230 ಕ್ವಿಂಟಲ್ ವಿತರಣೆ ಹಾಗೂ 249.6 ಕ್ವಿಂಟಲ್ ಲಭ್ಯವಿದೆ. ಭತ್ತ 200 ಕ್ವಿಂಟಲ್ ದಾಸ್ತಾನಿದ್ದು, 139.25 ಕ್ವಿಂಟಲ್ ಬೀಜ ವಿತರಣೆ ಹಾಗೂ 67.75 ಕ್ವಿಂಟಲ್ ಲಭ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಕಿರಣಕುಮಾರ ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಯೂರಿಯಾ ಗೊಬ್ಬರವು 27562 ಮೆಟ್ರಿಕ್ ಟನ್ ಬೇಡಿಕೆ ಇದೆ. ಏಪ್ರಿಲ್ ದಿಂದ ಈ ವರೆಗೆ 12642.95 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. 9252.87 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. 16898 ಮೆಟ್ರಿಕ್ ಟನ್ ಡಿಎಪಿ ಗೊಬ್ಬರವು ಬೇಡಿಕೆ ಪೈಕಿ ಏಪ್ರಿಲ್‌ ದಿಂದ ಈ ವರೆಗೆ 10418.18 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. 1744.50 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಇತರೆ ಗೊಬ್ಬಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‌ರು, ಪಶುಪಾಲನೆ, ಅಗ್ನಿಶಾಮಕ, ಆರೋಗ್ಯ, ಮಹಾನಗರ ಪಾಲಿಕೆ, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.