ಆಮೆ, ಕಾಡುಹಂದಿ ಬೇಟೆ: ಇಬ್ಬರು ಆರೋಪಿಗಳ ಸೆರೆ

| Published : Jun 21 2024, 01:10 AM IST

ಸಾರಾಂಶ

ಸೊರಬ ಜಿಲ್ಲೆಯ ಸೂರಣಗಿಯ ದ್ಯಾಮಣ್ಣ ರಮೇಶ(೨೬) ಮತ್ತು ತಾಲೂಕಿನ ಹೆಬ್ಬತ್ತಿಯ ಶ್ರೀಕಾಂತ ಕೆರಿಯಪ್ಪ ನಾಯ್ಕ(೪೨) ಬಂಧಿತ ವ್ಯಕ್ತಿಗಳಾಗಿದ್ದಾರೆ.

ಶಿರಸಿ: ಆಮೆಗಳನ್ನು ಅಕ್ರಮವಾಗಿ ಬೇಟೆಯಾಡಿ, ಮಾಂಸ ತಯಾರಿಸಿದ ವ್ಯಕ್ತಿಯೊಬ್ಬನನ್ನು ಮತ್ತು ಕಾಡುಹಂದಿ ಬೇಟೆಯಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಬನವಾಸಿ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಸೊರಬ ಜಿಲ್ಲೆಯ ಸೂರಣಗಿಯ ದ್ಯಾಮಣ್ಣ ರಮೇಶ(೨೬) ಮತ್ತು ತಾಲೂಕಿನ ಹೆಬ್ಬತ್ತಿಯ ಶ್ರೀಕಾಂತ ಕೆರಿಯಪ್ಪ ನಾಯ್ಕ(೪೨) ಬಂಧಿತ ವ್ಯಕ್ತಿಗಳಾಗಿದ್ದಾರೆ.ಬನವಾಸಿ ವಲಯ ದಾಸನಕೊಪ್ಪ ಶಾಖೆಯ ಅಂಡಗಿ ಅರಣ್ಯ ಪ್ರದೇಶದಲ್ಲಿ ಜೂ. ೧೬ರಂದು ಕಾಡುಹಂದಿ ಬೇಟೆಯಾಡಿ ಮಾಂಸ ತಯಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದಾಗ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು ನೀಡಿದ್ದ ಹೇಳಿಕೆಯ ಸುಳಿವಿನ ಮೇಲೆ ರಹಸ್ಯ ಕಾರ್ಯಾಚರಣೆ ನಡೆಸಿ, ದ್ಯಾಮಣ್ಣ ರಮೇಶ ಈತನ ಮನೆಯ ಹಿಂಭಾಗದಲ್ಲಿ ನಾಲ್ಕು ಜೀವಂತ ಆಮೆಗಳು ಮತ್ತು ಎರಡು ಆಮೆಗಳಿಂದ ಅರೆ ಬೇಯಿಸಿದ ಮಾಂಸವನ್ನು ಪಾತ್ರೆಯಲ್ಲಿ ಮುಚ್ಚಿಟ್ಟಿರುವುದು ಪತ್ತೆ ಮಾಡಿದ್ದು, ಒಟ್ಟಾರೆ ೬ ಆಮೆಗಳನ್ನು ಅಕ್ರಮವಾಗಿ ಬೇಟೆಯಾಡಿರುವುದು ದೃಢಪಟ್ಟಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆಮೆಗಳನ್ನು ದಾಸನಕೊಪ್ಪದಿಂದ ಮಳಗಿಗೆ ಹೋಗುವ ಮಾರ್ಗದಲ್ಲಿ ಹರಿಯುವ ಬದನಗೋಡ ಹಳ್ಳದಲ್ಲಿ ಸೇತುವೆ ಸಮೀಪ ಬಲೆ ಹಾಕಿ ಸೆರೆ ಹಿಡಿಯಲಾಗಿದೆ ಎಂದು ಎಸಗಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಸಿ.ಎನ್. ಮಾರ್ಗದರ್ಶನದಲ್ಲಿ ಬನವಾಸಿ ವಲಯಾರಣ್ಯಾಧಿಕಾರಿ ವರದ ರಂಗನಾಥ ಜಿ.ಎಚ್‌. ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ್, ಗಸ್ತು ಅರಣ್ಯ ಪಾಲಕ ದಯಾನಂದ ಬೊರ್ಕರ್, ಅರಣ್ಯ ವೀಕ್ಷಕರಾದ ನನ್ನೆಸಾಬ ಸಂಗೂರ, ಅಲ್ಲಾಭಕ್ಷ ರಾಜೇಸಾಬ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.