ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ಸತ್ತೇಗಾಲದ ಹ್ಯಾಂಡ್‌ಪೋಸ್ಟ್ ಚೆನ್ನಿಪರ ದೊಡ್ಡಿಯ ಬಳಿ ಕಬ್ಬು ಕಟಾವಿಗೆ ಬಂದಿದ್ದ ಬಂಜಾರ ಜನಾಂಗದ ಮಕ್ಕಳು, ಮಹಿಳೆಯರು, ಪುರುಷರು ವಿಷಪೂರಿತ ಕಾಯೊಂದನ್ನು ಸೇವಿಸಿ ಅಸ್ವಸ್ಥರಾದ ಘಟನೆ ನಡೆದಿದೆ.ಆಸ್ಪತ್ರೆಗೆ ದಾಖಲಾದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತದ ಉಪವಿಭಾಗಾಧಿಕಾರಿಗಳು, ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ಬಂಜಾರ ಭಾಷಾ ಮತ್ತು ಸಂಸ್ಕೃತಿ ಅಕಾಡಮಿ ಸದಸ್ಯರು ಭೇಟಿ ನೀಡಿ ಮಕ್ಕಳ ಮತ್ತು ಪೋಷಕರ ಆರೋಗ್ಯ ವಿಚಾರಿಸಿ ಅಗತ್ಯ ಪರಿಕರಗಳನ್ನು ವಿತರಿಸಿದರು. ಗುರುವಾರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬಂಜಾರ ಅಕಾಡೆಮಿ ಸದಸ್ಯ ಪಳನಿಸ್ವಾಮಿ ಜಾಗೇರಿ, ಉಪವಿಬಾಗಾಧಿಕಾರಿ ಮಹೇಶ್, ಕ್ಷೇತ್ರಶಿಕ್ಷಣಾಧಿಕಾರಿ ಮಂಜುಳ, ಸಿಡಿಪಿಒ ನಂಜಮ್ಮಣಿ ಸೇರಿದಂತೆ ಇನ್ನಿತರರು ಕಾಯಿ ತಿಂದು ಅಸ್ವಸ್ಥರಾದ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಪೋಷಕರಿಗೆ ನೀವು ವಲಸೆ ಹೊರಟರೂ ಸಹಾ ಅಲ್ಲಿನ ಶಾಲೆಗೆ ನಿಮ್ಮ ಮಕ್ಕಳನ್ನು ದಾಖಲು ಮಾಡುವಂತೆ ನಿರ್ದೇಶನ ನೀಡಲಾಯಿತು.
ಬಂಜಾರ ಅಕಾಡೆಮಿ ವತಿಯಿಂದ ಸದಸ್ಯ ಪಳನಿಸ್ವಾಮಿ ಜಾಗೇರಿ ಬ್ಯಾಗ್, ಪುಸ್ತಕ ವಿತರಿಸಿದರು, ಬಿಇಒ ಮಂಜುಳ ಮಕ್ಕಳಿಗಾಗಿ ಕಲಿಕಾ ಪುಸ್ತಕ ಮತ್ತು ಬಟ್ಟೆ ವಿತರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ನಂಜಮ್ಮಣಿ ಅವರು ಮಕ್ಕಳು ಮತ್ತು ಪೋಷಕರಿಗೆ ಬೆಡ್ ಶೀಟ್, ಬಟ್ಟೆ, ಸೀರೆ ಇನ್ನಿತರೆ ಅಗತ್ಯ ಪರಿಕರ ವಿತರಿಸಿದರು. ಸರ್ಕಾರಿ ಶಾಲೆಗೆ ದಾಖಲಿಸಲು ಸೂಚನೆಶಿಕ್ಷಣಾಧಿಕಾರಿ ಮಂಜುಳ ಮಾತನಾಡಿ, ಯಾವುದೆ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದು, ಕೂಡಲೆ ಸಂಬಂಧಿಸಿದ ಶಿಕ್ಷಕರು ಅಸ್ವಸ್ಥರಾಗಿ ಚೇತರಿಕೆಯಾದ ಮಕ್ಕಳನ್ನು ನಾಳೆಯಿಂದಲೇ ಚನ್ನಿಪುರ ಸರ್ಕಾರಿ ಶಾಲೆಗೆ ದಾಖಲು ಮಾಡಿಕೊಳ್ಳಿ ಎಂದು ತಾಕೀತು ಮಾಡಿದರು. ನೀವು ಎಲ್ಲಿಗೆ ತೆರಳಿದರೂ ಮಕ್ಕಳ ಕಲಿಕೆಗೆ ಹಿನ್ನಡೆ ಮಾಡಬೇಡಿ, ಶಿಕ್ಷಣ ಮಕ್ಕಳ ಹಕ್ಕು, ಅದಕ್ಕೆ ಅಡ್ಡಿಯುಂಟು ಮಾಡದೆ ಸರ್ಕಾರಿ ಶಾಲೆಗೆ ದಾಖಲು ಮಾಡಿ ಎಂದು ಪೋಷಕರಿಗೆ ಸೂಚಿಸಿದರು.ಬಂಜಾರ ಅಕಾಡಮಿ ಸದಸ್ಯ ಪಳನಿಸ್ವಾಮಿ ಜಾಗೇರಿ ಮಾತನಾಡಿ, ಬಂಜಾರ ಮಕ್ಕಳು ಅದರಲ್ಲೂ ಪರಿಶಿಷ್ಟ ಜನಾಂಗಕ್ಕೆ ಸೇರಿದ ಈ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿರುವುದು ದುರಂತ, ಈಗನ ಮಾಹಿತಿ ಪ್ರಕಾರ ನಮ್ಮ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಮಂದಿ ಮಕ್ಕಳು ಕೂಲಿಗಾಗಿ ಬಂದ ಪೋಷಕರ ಜೊತೆ ಬಂದಿದ್ದಾರೆ. ಈ ಕುರಿತು ಪಾರದರ್ಶಕ ತನಿಖೆಯಾಗಬೇಕು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕ್ರಮವಹಿಸಬೇಕು. ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಕೂಲಿಗಾಗಿ ಬಂದ ಕಾರ್ಮಿಕರಿಗೆ ಹಾಸ್ಟೆಲ್‌ನಲ್ಲಿ ದಾಖಲಾತಿಗೆ ಅವಕಾಶ ನೀಡುವ ಮೂಲಕ ಅವರ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಬೇಕು ಎಂದರು. ನಾವು ಕೂಲಿಗೆ ಬರುವಾಗ ವಿಧಿ
ಇಲ್ಲದೆ ಮಕ್ಕಳನ್ನು ಕರೆ ತರುತ್ತೆವೆಬಂಜಾರ ಸಮಾಜದ ಕೂಲಿ ಕಾರ್ಮಿಕ ಕುಬೇರ ನಾಯಕ್ ಮಾತನಾಡಿ, ನಾವು ಧಾರವಾಡ, ಕೊಪ್ಪಳದಿಂದ ಕೂಲಿಗಾಗಿ ಬಂದಿದ್ದೇವೆ, ಬರುವಾಗ ಮಕ್ಕಳನ್ನು ಬಿಟ್ಟು ಬರಲಾಗದೆ ವಿಧಿ ಇಲ್ಲದೆ ಕರೆತಂದಿದ್ದೆವೆ, ನಮ್ಮೊಂದಿಗೆ ಇನ್ನು ಹಲವು ಮಂದಿ ಬಂದಿದ್ದು ಮುಡಿಗುಂಡದ ಸಮೀಪ 7 ಮಂದಿ, ಯಳಂದೂರು ಭಾಗದಲ್ಲೂ 6 ಮಂದಿ ಮಕ್ಕಳಿದ್ದಾರೆ. ನಮ್ಮ ಮಕ್ಕಳನ್ನು ನಾವು ಬಿಟ್ಟು ಬಂದರೆ ನೋಡಿಕೊಳ್ಳಲು ಯಾರೂ ಇಲ್ಲ, ಹಾಗಾಗಿ ನಾವು ಜೊತೆ ಕರೆತರಬೇಕಾಗಿದೆ ಎಂದು ಮಾಹಿತಿ ನೀಡಿದರು.