ಸಾರಾಂಶ
ಹಾವೇರಿ: ಚೀಟಿ ವ್ಯವಹಾರದಲ್ಲಿ ಬಡ್ಡಿ ಹಣ ಬರುತ್ತದೆ ಹಾಗೂ ಫಿಕ್ಸೆಡ್ ಅಮೌಂಟ್ ಸ್ಕೀಂನಲ್ಲಿ ಹಣ ಹಾಕಿದರೆ ದುಪ್ಪಟ್ಟು ಬಡ್ಡಿ ಸಿಗುತ್ತದೆ ಎಂದು ಹೇಳಿ ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಯಾಮಾರಿಸಿ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಎಸ್‌ಪಿ ಅಂಶುಕುಮಾರ, ಜಿಲ್ಲೆಯ ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಳೇಶ್ವರ ಗ್ರಾಮದಲ್ಲಿ ಒಂದು ಲಕ್ಷ ರುಪಾಯಿ ಹಣದ ಚೀಟಿ ಹಾಕಿದರೆ, ಮೂರು ತಿಂಗಳುಗಳಲ್ಲಿ ಎರಡು ಲಕ್ಷ ಹಣ ಕೊಡುವುದಾಗಿ ಹೇಳಿದ ಸ್ಥಳೀಯ ವ್ಯಕ್ತಿಯ ಮಾತು ನಂಬಿ ಗ್ರಾಮದ ಮಹಿಳೆ ಸುಮಲತಾ ಪಾಟೀಲ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರಿಂದ ಕಳೆದ ಒಂದೂವರೆ ವರ್ಷದಿಂದ ಸುಮಾರು ₹60 ಲಕ್ಷ ಹಣವನ್ನು ಪಡೆದುಕೊಂಡಿದ್ದರು. ಈ ಪೈಕಿ ₹10 ರಿಂದ ₹12 ಲಕ್ಷ ಮರಳಿಸಿದ್ದು, ಇನ್ನುಳಿದ ₹45 ಲಕ್ಷಗಳನ್ನು ಸುಳ್ಳು ಹೇಳಿ ವಂಚಿಸಿದ್ದರು. ಸ್ವಸಹಾಯ ಸಂಘಗಳ ಮಹಿಳೆಯರು ಸುಮಲತಾಗೆ ಒತ್ತಡ ಹಾಕಿದ ಪರಿಣಾಮ ಆತ್ಮಹತ್ಯೆಗೆ ಯತ್ನಿಸಿದ್ದರು.ಈ ಘಟನೆ ಹಿನ್ನೆಲೆ ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಪೊಲೀಸರು ಮೇಲಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮದ ಶೈಲಾ ಪಾಟೀಲ ಹಾಗೂ ಬೊಮ್ಮನಹಳ್ಳಿ ಗ್ರಾಮದ ಈಶ್ವರಗೌಡ ಪಾಟೀಲ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದರು.ಕಾರ್ಯಾಚರಣೆಯಲ್ಲಿ ಕೆ.ವಿ. ಗುರುಶಾಂತಪ್ಪ, ಆಂಜನೇಯ ಎನ್.ಎಚ್., ಶರಣಪ್ಪ ಹಂದ್ರಗಲ್ಲ, ಶಂಭು ಸುಳ್ಳಳ್ಳಿ, ಮಾರುತಿ ಹಿಟ್ಲರ, ಪಿ.ಬಿ ಹೊಸಮನಿ, ಸುಭಾಸ ಚೌಹಾಣ, ಮಲ್ಲು ಹದ್ಲಿ ಸೇರಿ ಇತರರು ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.
ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆರಾಣಿಬೆನ್ನೂರು: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ತಾಲೂಕಿನ ಅಂಕಸಾಪುರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹರಿಹರಪ್ಪ ಕರಿಯಪ್ಪ ನಡುವಿನಮನಿ (55) ಮೃತಪಟ್ಟ ರೈತ. ಈ ರೈತರ ಹೆಸರಿನಲ್ಲಿ ಎರಡೂ ಮುಕ್ಕಾಲು ಎಕರೆ ಜಮೀನು ಇದ್ದು, ಇವರು ಕೃಷಿಗಾಗಿ ಮೆಡ್ಲೇರಿ ಕೆವಿಜಿ ಬ್ಯಾಂಕಿನಲ್ಲಿ ₹2.50 ಲಕ್ಷ, ಪತ್ನಿಯ ಹೆಸರಿನಲ್ಲಿ ಧರ್ಮಸ್ಥಳ ಸಂಘದಲ್ಲಿ ₹1 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸುವ ಚಿಂತೆಯಿಂದ ಮನೆಯ ಎತ್ತಿನ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.