ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪ್ರತ್ಯೇಕವಾದ ಎರಡು ಪ್ರಕರಣದಲ್ಲಿ ಶ್ರೀಗಂಧದ ಮರ ಅಕ್ರಮ ಸಾಗಣೆ ಮಾಡುತ್ತಿದ್ದ ತಮಿಳುನಾಡಿನ ಇಬ್ಬರು ವ್ಯಕ್ತಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.ತಾಲೂಕಿನ ಮಲೆ ಮಾದೇಶ್ವರ ವನ್ಯಧಾಮದ ಅರಣ್ಯ ಪ್ರದೇಶದಲ್ಲಿ ಅಪ್ರಾಪ್ತ ಬಾಲಕ ಹಾಗೂ ಇಬ್ಬರು ವ್ಯಕ್ತಿಗಳು ಶ್ರೀಗಂಧದ ಮರ ಕಡಿದು ಎರಡು ತುಂಡುಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ಸಾಗಣೆಗೆ ಯತ್ನಿಸುತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದಾಗ ಅಪ್ರಾಪ್ತ ಬಾಲಕ ಸಿಕ್ಕಿಬಿದ್ದಿದ್ದಾನೆ. ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಕಳ್ಳ ಸಾಗಾಣಿಗೆ ಸಜ್ಜುಗೊಳಿಸಲಾಗಿದ್ದ 62 ಕೆಜಿ ಶ್ರೀಗಂಧದ 2 ತುಂಡುಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ವಿಲ್ಲೂಪುರಂ ಜಿಲ್ಲೆಯ ಚಿನ್ನ ಸೇಲಂ ತಾಲೂಕಿನ ಪೆರುಮಾಳ್ ಮತ್ತು ಮುರುಗನ್ ಪರಾರಿಯಾಗಿದ್ದಾರೆ. ಅಪ್ರಾಪ್ತ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಅರಣ್ಯಾಧಿಕಾರಿಗಳು ಒಪ್ಪಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಪಾದಯಾತ್ರಿಗಳ ನೆಪದಲ್ಲಿ 11.70 ಕೆಜಿ ತೂಕವುಳ್ಳ ಶ್ರೀಗಂಧದ 33 ತುಂಡುಗಳು ಬ್ಯಾಗಿನಲ್ಲಿ ಇರಿಸಿಕೊಂಡು ಸಾಗಣೆ ಮಾಡುತ್ತಿದ್ದಾಗ ಅರಣ್ಯ ಅಧಿಕಾರಿಗಳು ವ್ಯಕ್ತಿಯನ್ನು ತಡೆದು ಪರಿಶೀಲಿಸಿದ್ದಾರೆ. ಆಗ ಶ್ರೀಗಂಧದ ತುಂಡುಗಳು ಬ್ಯಾಗಿನಲ್ಲಿ ಅಕ್ರಮ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿವೆ.ಅಧಿಕಾರಿಗಳು ತಮಿಳುನಾಡಿನ ಸೇಲಂ ಜಿಲ್ಲೆಯ ಅತುರು ತಾಲೂಕಿನ ನೈಯ್ಯಮಲೈ ಸೆಡ್ಯ ಯಾನ್ ವ್ಯಕ್ತಿಯನ್ನು ಬಂಧಿಸಿದ್ದಾರೆ. ತಪಾಸಣೆ ವೇಳೆ ತಮಿಳುನಾಡಿಗೆ ಅಕ್ರಮವಾಗಿ ಶ್ರೀಗಂಧ ಸಾಗಣೆ ಮಾಡುತ್ತಿರುವುದು ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದ್ದು, ಈತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಗಡಿಯಲ್ಲಿ ಶ್ರೀಗಂಧ ಅಕ್ರಮ ಸಾಗಾಣಿ ಅರಣ್ಯಾಧಿಕಾರಿಗಳು ಕಟ್ಟೆಚ್ಚರ:ತಮಿಳುನಾಡಿನ ವಿವಿಧ ಗ್ರಾಮಗಳಿಂದ ಬಂದಿದ್ದ ವ್ಯಕ್ತಿಗಳು ಮಲೆ ಮಾದೇಶ್ವರ ಬೆಟ್ಟಕ್ಕೆ ಪೂಜೆಗೆಂದು ಭಕ್ತರ ಸೋಗಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ. ತಮಿಳುನಾಡಿನಿಂದ ಬರುವ ಹಾಗೂ ಹೋಗುವ ವ್ಯಕ್ತಿಗಳ ಬಗ್ಗೆ ಅರಣ್ಯಾಧಿಕಾರಿಗಳು ತಾಲೂಕಿನ ಗಡಿ ಭಾಗದಲ್ಲಿ ಕಟ್ಟೆಚರ ವಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್, ಉಪವಲಯ ಅರಣ್ಯಾಧಿಕಾರಿ ಮಹಾಂತೇಶ್ ಕುಂಬಾರ, ಧರ್ಮರಾಜ ಗುತ್ತೇದಾರ, ಗಸ್ತು ಅರಣ್ಯಪಾಲಕ ಸಿದ್ದರಾಮಣ್ಣ, ಚಿನ್ರಾಜು ರವಿಕುಮಾರ ಭಾಗವಹಿಸಿದ್ದರು.