ಹೊಸ ವರ್ಷಾಚರಣೆ ಮುಗಿಸಿ ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯರ ಜತೆ ಅನುಚಿತವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ ಕಾನ್‌ಸ್ಟೇಬಲ್ ಮೇಲೆ ಪುಂಡಾಟಿಕೆ ನಡೆಸಿದ್ದ ಇಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷಾಚರಣೆ ಮುಗಿಸಿ ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯರ ಜತೆ ಅನುಚಿತವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ ಕಾನ್‌ಸ್ಟೇಬಲ್ ಮೇಲೆ ಪುಂಡಾಟಿಕೆ ನಡೆಸಿದ್ದ ಇಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದ ಚೆನ್ನೈ ನಗರದ ಅನ್ಷ್‌ ಮೆಹ್ತಾ ಹಾಗೂ ಪರ್ವ್ ರಥಿ ಬಂಧಿತರಾಗಿದ್ದು, ಕ್ವೀನ್ಸ್ ರಸ್ತೆಯ ಇಂಡಿಯನ್ ಎಕ್ಸ್‌ಪ್ರೆಸ್ ಬಿಲ್ಡಿಂಗ್‌ನ ಸೂಜಿ ಕ್ಯೂಬ್ ಬಾರ್ ಅಂಡ್ ರೆಸ್ಟೋರೆಂಟ್‌ ಮುಂಭಾಗ ಡಿ.31 ರಂದು ರಾತ್ರಿ ಕ್ಯಾಬ್‌ಗೆ ನಾಲ್ವರು ಯುವತಿಯರು ಕಾಯುತ್ತಿದ್ದಾಗ ಈ ಕೃತ್ಯ ನಡೆದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ಯೂಬ್ ಬಾರ್‌ನಲ್ಲಿ ಹೊಸ ವರ್ಷಾಚರಣೆ ಮುಗಿಸಿ ಯುವತಿಯರು ಮನೆಗೆ ಮರಳುತ್ತಿದ್ದರು. ಅದೇ ರಸ್ತೆಯಲ್ಲಿ ಬಂದ ಕಿಡಿಗೇಡಿಗಳು, ಆ ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಆಗ ಅಲ್ಲೇ ಭದ್ರತಾ ಕರ್ತವ್ಯದಲ್ಲಿ ತೊಡಗಿದ್ದ ವಿಧಾನಸೌಧ ಠಾಣೆ ಕಾನ್‌ಸ್ಟೇಬಲ್ ಕೆ. ರವಿ ಅವರು, ಮೆಹ್ತಾ ಹಾಗೂ ಪರ್ವ್‌ಗೆ ಅಸಭ್ಯವಾಗಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕೆರಳಿದ ಆರೋಪಿಗಳು, ಕಾನ್‌ಸ್ಟೇಬಲ್ ಅವರ ಬಟ್ಟೆ ಹಿಡಿದು ಎಳೆದಾಡಿ ಮೇಲೆ ಗಲಾಟೆ ಮಾಡಿದ್ದಾರೆ. ಕೂಡಲೇ ಹೆಚ್ಚುವರಿ ಸಿಬ್ಬಂದಿ ತೆರಳಿ ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಕಾನ್‌ಸ್ಟೇಬಲ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.