ಸಾರಾಂಶ
ನಗರದ ಗೌಸಿಯಾ ಕಾಲನಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಇಬ್ಬರನ್ನು ಬಂಧಿಸಿ ₹4 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ನಗರದ ಗೌಸಿಯಾ ಕಾಲನಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಇಬ್ಬರನ್ನು ಬಂಧಿಸಿ ₹4 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.ಗೌಸಿಯಾ ಕಾಲನಿಯ ಖಾಜಾ ಹುಸೇನ್ ಸಾಬ, ಮೆಹಬೂಬ ನಗರದ ಹನೀಫ್ ಶಕ್ಷಾವಲಿ ಬಂಧಿತರು.ಇದೇ ಕಾಲನಿಯ ಗೋವಾ ಬೇಕರಿ ಹಿಂಭಾಗದಲ್ಲಿರುವ ಎಂ.ಡಿ. ಸರ್ವರ್ ಹುಸೇನ್ ನಿವಾಸದಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು.
₹2 ಲಕ್ಷ 63 ಸಾವಿರ ಮೌಲ್ಯದ 70 ಗ್ರಾಂ ಚಿನ್ನದ ಆಭರಣಗಳು, ₹38,400 ಮೌಲ್ಯದ ಬೆಳ್ಳಿ ಒಡವೆ, ₹1 ಲಕ್ಷ ಮೌಲ್ಯದ ಬಜಾಜ್ ಪಲ್ಸರ್ ಬೈಕ್, ಸೇರಿದಂತೆ ಒಟ್ಟು ₹4.1 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಮಾರ್ಗದರ್ಶನದಲ್ಲಿ, ನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ ಮಾಳೆ, ಸಿಬ್ಬಂದಿ ನಾಗರಾಜ, ವೆಂಕಾರೆಡ್ಡಿ, ಚಿರಂಜಿವಿ, ಮರಿಶಾಂತಗೌಡ ವಿಶ್ವನಾಥ, ಮೈಲಾರಪ್ಪ, ರಾಘವೇಂದ್ರ, ಸುಭಾಷ ಎಚ್.ಸಿ., ವಿಶ್ವನಾಥ ಕಾರ್ಯಾಚರಣೆಯಲ್ಲಿದ್ದರು. ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಎಸ್ಪಿ ವಿಶೇಷ ಬಹುಮಾನ ಘೋಷಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು-ಸಾವಿನ ಸಂಖ್ಯೆ ನಾಲ್ಕಕ್ಕೇರಿಕೆ:ಹುಬ್ಬಳ್ಳಿಯ ಹೆಬಸೂರ-ಕಿರೇಸೂರ ಗ್ರಾಮದ ಮಧ್ಯೆ ಇತ್ತೀಚಿಗೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡ ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತನಾಗಿದ್ದು, ಈ ದುರಂತದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೇರಿಕೆಯಾಗಿದೆ.ಶುಕ್ರವಾರ ತಡರಾತ್ರಿ ಓಮಿನಿ-ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದ ಒಂದೇ ಕುಟುಂಬದ ಅಜ್ಜ, ಮಗ, ಮೊಮ್ಮಗ ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ಗಾಯಗೊಂಡಿದ್ದ ಗಾಯಾಳು ಇಮಾಮಹುಸೇನ ಮಂಗಳೂರು ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಹುಬ್ಬಳ್ಳಿಯಲ್ಲಿ ಮೃತಪಟ್ಟಿದ್ದಾರೆ.ಒಟ್ಟು 6 ಜನ ಕಾರವಾರ ಬಳಿಯ ಹಲಗಾಕ್ಕೆ ಪಾಶ್ವವಾರ್ಯು ಚಿಕಿತ್ಸೆಗಾಗಿ ತೆರಳಿದ್ದರು. ಆದರೆ, ಮರಳಿ ಸ್ವ ಗ್ರಾಮಕ್ಕೆ ಬರುವಾಗ ಓಮಿನಿ ವಾಹನ ಎದುರಿಗೆ ಬಂದ ಲಾರಿಗೆ ಗುದ್ದಿದ ಪರಿಣಾಮ ಮೂವರು ಮೃತಪಟ್ಟು, ಇನ್ನೂ ಮೂವರಿಗೆ ಗಾಯವಾಗಿತ್ತು. ಗಾಯಗೊಂಡವರನ್ನು ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.