ಪ್ರಾಂಚೈಸಿ ಕೊಡುವುದಾಗಿ 5 ಲಕ್ಷ ರು.ಗೂ ಅಧಿಕ ಮೊತ್ತ ವಂಚಿಸಿದ್ದ ಬಿಹಾರದ ಇಬ್ಬರು ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಯಶಸ್ವಿ ಕಾರ್ಯಾಚರಣೆಯ ಮೂಲಕ ಬಂಧಿಸಿ, ಹಣವನ್ನು ಜಪ್ತು ಮಾಡಿಕೊಂಡಿದ್ದಾರೆ.
ಉಡುಪಿ: ಉಡುಪಿಯ ಅವಿನಾಶ್ ಎಂಬವರಿಗೆ ಕಂಪನಿಯೊಂದರ ಪ್ರಾಂಚೈಸಿ ಕೊಡುವುದಾಗಿ 5 ಲಕ್ಷ ರು.ಗೂ ಅಧಿಕ ಮೊತ್ತ ವಂಚಿಸಿದ್ದ ಬಿಹಾರದ ಇಬ್ಬರು ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಯಶಸ್ವಿ ಕಾರ್ಯಾಚರಣೆಯ ಮೂಲಕ ಬಂಧಿಸಿ, ಹಣವನ್ನು ಜಪ್ತು ಮಾಡಿಕೊಂಡಿದ್ದಾರೆ.ಬಂಧಿತ ಆರೋಪಿಗಳು ಮೂಲತಃ ಬಿಹಾರದ ಪಾಟ್ನಾದ ವಿವಾಸಿಗಳಾದ ದೇವ್ ಹರ್ಷ (20) ಮತ್ತು ಚಂದನ್ ಕುಮಾರ್ (29) ಎಂದು ಗುರುತಿಸಲಾಗಿದೆ.
ಅವಿನಾಶ್ ಅವರು ಆನ್‌ಲೈನ್ ಮೂಲಕ ರಿಲಯನ್ಸ್ ಇಂಡಸ್ಟ್ರೀ ಮಾಲಕತ್ವದ ಕ್ಯಾಂಪಾ ಕೋಲಾ ಪ್ರಾಂಚೈಸಿಗೆ ಅರ್ಜಿ, ವಿದ್ಯಾಭ್ಯಾಸದ ದಾಖಲಾತಿ, ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಆಧಾರ್‌ಕಾರ್ಡ್‌ಗಳನ್ನು ಕಳುಹಿಸಿದ್ದರು. ನಂತರ ಅವರಿಗೆ ಪ್ರಾಂಚೈಸಿ ಮಂಜೂರಾಗಿದೆ ಎಂಬ ಸಂದೇಶ ಬಂದಿತ್ತು ಮತ್ತು ಆರೋಪಿಗಳು ಕರೆ ಮಾಡಿ ರಿಜಿಸ್ಟೇಷನ್, ಪ್ರೋಡಕ್ಟ್ ಬುಕಿಂಗ್‌ಗೆಂದು ಹಂತಹಂತವಾಗಿ 5,72,500 ರು.ಗಳನ್ನು ಅವರ ಹೇಳಿದ ಖಾತೆಗಳಿಗೆ ಜಮಾ ಮಾಡಿದ್ದರು. ನಂತರ ಪುನಃಪುನಃ ಹಣ ಹಾಕುವಂತೆ ಒತ್ತಾಯಿಸಿದಾಗ, ಅವಿನಾಶ್ ಸಂಶಯಗೊಂಡು ಸೆನ್ ಠಾಣೆಗೆ ದೂರು ನೀಡಿದ್ದರು.ತಕ್ಷಣ ಈ ಪ್ರಕರಣದ ತನಿಖೆ ಆರಂಭಿಸಿದ ಎಎಸ್ಪಿ ಡಾ. ಹರ್ಷ ಪ್ರಿಯಂವದ ಅವರ ವಿಶೇಷ ತಂಡವು ಖಚಿತ ಮಾಹಿತಿಯ ಮೇರೆಗೆ ಬಿಹಾರ ರಾಜ್ಯದ ಪಾಟ್ನಾ ಮತ್ತು ಬೆಂಗಳೂರುನಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 97 ಸಾವಿರ ರು. ಮೌಲ್ಯದ 10 ಮೊಬೈಲ್, 68,000 ರು. ಮೌಲ್ಯದ 4 ಲ್ಯಾಪ್ ಟಾಪ್ ಮತ್ತು 4,50,000 ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ.