ಒಂದೆಡೆ ನರಹಂತಕ ಹುಲಿ ಭಯ ಮೂಡಿಸಿದ್ದರೇ ಮತ್ತೊಂದೆಡೆ ಚಿರತೆ ಭೀತಿ ಸೃಷ್ಟಿಸಿದೆ. ಹನೂರು ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ಒಂದಾದ ಮೇಲೆ ಒಂದರಂತೆ ನಾಲ್ಕು ಮೇಕೆಗಳ ಮೇಲೆ ಚಿರತೆ ಮುಗಿಬಿದ್ದು ರಕ್ತ ಹೀರಿ ಕೊಂದಿದ್ದು ರೈತರು, ಜನರು ಬೆಚ್ಚಿಬಿದ್ದಿದ್ದಾರೆ. ರೈತರು ತಮ್ಮ ತೋಟಗಳಿಗೆ ಹಾಗೂ ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುತ್ತಾ..? ಕಾದು ನೋಡಬೇಕಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಗಲಿನಲ್ಲಿ ಡ್ರೋಣ್, ರಾತ್ರಿ ವೇಳೆ ಥರ್ಮಲ್ ಡ್ರೋಣ್ ಹಾಕಿ ಹುಡುಕಾಟ ನಡೆಸಿದರೂ, ವ್ಯಾಘ್ರನ ಜಾಡು ಹಿಡಿದು ಶ್ವಾನದಳ ಸುತ್ತಾಡುತ್ತಿದ್ದರೂ ರೈತನ ಬಲಿ ಪಡೆದ ಹುಲಿ ಇನ್ನೂ ಸೆರೆ ಸಿಕ್ಕಿಲ್ಲ. ಇನ್ನೊಂದೆಡೆ ಚಿರತೆ ದಾಳಿಗೆ ನಾಲ್ಕು ಮೇಕೆಗಳು ಜೀವ ಚೆಲ್ಲಿವೆ. ಒಟ್ಟಾರೆ ವನ್ಯಜೀವಿಗಳ ಉಪಟಳಕ್ಕೆ ಗಡಿಜಿಲ್ಲೆ ರೈತರು ವಿಲವಿಲ ಎನ್ನುತ್ತಿದ್ದಾರೆ.ಗಡಿಜಿಲ್ಲೆ ಚಾಮರಾಜನಗರದಲ್ಲಿ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗಿದ್ದು, ರೈತರು ಜಮೀನಿಗೆ ತೆರಳಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದ ಜಮೀನಿನಲ್ಲಿ ಹುಲಿ ದಾಳಿಗೆ ರೈತ ಬಸವಣ್ಣ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆ ನಡೆಸಿದರಾದರೂ ವ್ಯಾಘ್ರನ ಪತ್ತೆ ಮಾತ್ರ ಆಗಿಲ್ಲ. ಡ್ರೋಣ್ ಹಾಗೂ ಥರ್ಮಲ್ ಡ್ರೋಣ್, ಶ್ವಾನದಳದ ಮೂಲಕ ಕಾರ್ಯಾಚರಣೆ ನಡೆಸಿದರೂ ಇದುವರೆಗೂ ಹುಲಿ ಸುಳಿವು ಸಿಕ್ಕಿಲ್ಲ. ಈ ನಡುವೆ ಚಾಮರಾಜನಗರ ತಾಲೂಕಿನ ಮರಿಯಾಲದಲ್ಲಿ ಚಿರತೆ ದಾಳಿಗೆ ಮೂರು ಹಸುಗಳು ಬಲಿಯಾಗಿದ್ದು ರೈತರು ತೀವ್ರ ಆತಂಕ ಹೊರಹಾಕಿದ್ದಾರೆ.
ಮರಿಯಾಲ ಗ್ರಾಮದಲ್ಲಿ ಚಿರತೆ ದಾಳಿ: ಎರಡು ಹಸು, ಒಂದು ಕರು ಬಲಿಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಎರಡು ಹಸು ಹಾಗೂ ಒಂದು ಕರುವನ್ನು ಬಲಿ ಪಡೆದಿರುವ ಘಟನೆ ಬುಧವಾರ ನಡೆದಿದೆ.
ಗ್ರಾಮದ ರೈತ ಶಂಕರ್ ಅವರಿಗೆ ಸೇರಿದ ಎರಡು ಹಸು ಹಾಗೂ ಒಂದು ಕರು ಚಿರತೆ ದಾಳಿಗೆ ಬಲಿಯಾಗಿವೆ ಎನ್ನಲಾಗಿದೆ.ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು, ಪದೇಪದೇ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಜಾನುವಾರುಗಳನ್ನು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡುವಂತೆಯೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂದೆಡೆ ನರಹಂತಕ ಹುಲಿ ಭಯ ಮೂಡಿಸಿದ್ದರೇ ಮತ್ತೊಂದೆಡೆ ಚಿರತೆ ಭೀತಿ ಸೃಷ್ಟಿಸಿದೆ. ಹನೂರು ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ಒಂದಾದ ಮೇಲೆ ಒಂದರಂತೆ ನಾಲ್ಕು ಮೇಕೆಗಳ ಮೇಲೆ ಚಿರತೆ ಮುಗಿಬಿದ್ದು ರಕ್ತ ಹೀರಿ ಕೊಂದಿದ್ದು ರೈತರು, ಜನರು ಬೆಚ್ಚಿಬಿದ್ದಿದ್ದಾರೆ. ರೈತರು ತಮ್ಮ ತೋಟಗಳಿಗೆ ಹಾಗೂ ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುತ್ತಾ..? ಕಾದು ನೋಡಬೇಕಿದೆ.ಚಾಮರಾಜನಗರ ಜಿಲ್ಲೆಯಲ್ಲಿ ನಿತ್ಯ ಒಂದಲ್ಲ ಒಂದು ಕಡೆ ವನ್ಯಜೀವಿಗಳ ಉಪಟಳ ಕಂಡು ಬರುತ್ತಿದ್ದು, ರೈತರಂತೂ ರೋಸಿಹೋಗಿದ್ದಾರೆ. ಒಂದೆಡೆ ಆನೆ ಲಗ್ಗೆ ಇಟ್ಟರೆ ಮತ್ತೊಂದೆಡೆ ಹುಲಿ- ಚಿರತೆಗಳು ದಾಳಿ ನಡೆಸುತ್ತಿವೆ. ಸರ್ಕಾರಗಳು ಕಾಡುಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ. ವನ್ಯಜೀವಿಗಳ ರಕ್ಷಣೆ ಜೊತೆಗೆ ರೈತರಿಗೂ ನಿರಾಂತಕದ ವಾತಾವರಣ ನಿರ್ಮಿಸಬೇಕಿದೆ.