ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಭಾರೀ ಬಿಸಿಲಿನ ವಾತಾವರಣದ ನಡುವೆ ಇದೀಗ ಎರಡು ದಿನ ಹೀಟ್ ವೇವ್ (ಶಾಖದ ಅಲೆ) ಹಳದಿ ಅಲರ್ಟ್‌ನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಫೆ.26 ಮತ್ತು 27ರಂದು ಹೀಟ್ ವೇವ್ ಅಲರ್ಟ್ ಘೋಷಿಸಲಾಗಿದೆ. ಈ ಎರಡು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಸೂಚನೆ ನೀಡಲಾಗಿದೆ.
ಅತ್ಯಧಿಕ ತಾಪಮಾನ:ಶಾಖದ ಅಲೆಯ ಪರಿಣಾಮ ದ.ಕ. ಜಿಲ್ಲೆಯ ತಾಪಮಾನ ಬುಧವಾರ ಭಾರೀ ಏರಿಕೆ ಕಂಡಿತ್ತು. ಫೆಬ್ರವರಿ ತಿಂಗಳಲ್ಲೇ ಅತ್ಯಂತ ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಕಂಡುಬರುವ ಉಷ್ಣಾಂಶ ಈಗಲೇ ದಾಖಲಾಗಿರುವ ಬಗ್ಗೆ ಆತಂಕ ಹೆಚ್ಚಿದೆ.
ಫೆ.27ರಂದು ಕೂಡ ಗರಿಷ್ಠ ಪ್ರಮಾಣದ ಉಷ್ಣಾಂಶದ ಜತೆ ಹೀಟ್ ವೇವ್ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಭಾರೀ ತಾಪಮಾನ ಏರಿಕೆ ಕಂಡುಬಂದಿರುವುದರಿಂದ ಅಕಾಲಿಕ ಮಳೆಯ ಸಾಧ್ಯತೆ ಇರಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. .......
ಹೀಟ್ ವೇವ್ ಮುನ್ನೆಚ್ಚರಿಕೆ ಏನೇನು?ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇರಿ, ನೇರ ಬಿಸಿಲು/ ಬಿಸಿ ಗಾಳಿಗೆ ಒಡ್ಡಿಕೊಳ್ಳಬೇಡಿ. ಬಿಸಿಲಿನ ಅವಧಿಯಲ್ಲಿ ಕೊಡೆಗಳನ್ನು ಬಳಸಿ. ಸಾಧ್ಯವಾದಷ್ಟು ಹತ್ತಿಯ ಉಡುಪುಗಳನ್ನು ಧರಿಸಿ. ಕಪ್ಪು/ ಗಾಢ ಬಣ್ಣದ ಸಿಂಥಟಿಕ್ ಉಡುಪುಗಳನ್ನು ಧರಿಸಬೇಡಿ. ಹತ್ತಿಯ ಟೋಪಿಗಳನ್ನು ಬಳಸಿ. ನೇರವಾಗಿ ಬಿಸಿಲಿನ ಝಳಕ್ಕೆ ತಲೆ ಒಡ್ಡಬೇಡಿ. ಹೆಚ್ಚಿನ ಬಿಸಿಲು ಅವಧಿಯಲ್ಲಿ ವಿಶ್ರಾಂತಿ ಪಡೆಯಿರಿ. ಹೆಚ್ಚಿನ ಬಿಸಿಲು ಇರುವ ಅವಧಿಯಲ್ಲಿ ಶ್ರಮದಾಯಕ ದೈಹಿಕ ಕೆಲಸಗಳನ್ನು ಮಾಡಬೇಡಿ. ಸಾಕಷ್ಟು ನೀರು, ಮಜ್ಜಿಗೆ ಕುಡಿಯಿರಿ. ಬಿಸಿ ಚಹ, ಮದ್ಯ ಸೇವಿಸಬೇಡಿ. ವಾಸವಿರುವ ಕೋಣೆಯನ್ನು ತಂಪಾಗಿರಿಸಿ. ವಾಸವಿರುವ ಕೋಣೆಯಲ್ಲಿ ನೇರವಾಗಿ ಬಿಸಿಲು ಬೀಳುವುದನ್ನು ತಪ್ಪಿಸಿ. ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೆ ತಂಪಾದ ಸ್ಥಳಕ್ಕೆ ರವಾನಿಸಿ, ಚಿಕಿತ್ಸೆ ನೀಡಿ. ಬಿಸಿಗಾಳಿ ಸಂದರ್ಭಗಳಲ್ಲಿ ಚಹಾ, ಕಾಫಿ ಮತ್ತು ಜೇನು ಸೇವಿಸಬೇಡಿ ಎಂದು ಸಾರ್ವಜನಿಕರಿಗೆ ಹವಾಮಾನ ಇಲಾಖೆ ಸೂಚಿಸಿದೆ.