ಸಾರಾಂಶ
ಸಿದ್ಧಲಿಂಗಪುರ ಅರಸಿನಕುಪ್ಪೆಯ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಿಸಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮೀಪದ ಸಿದ್ಧಲಿಂಗಪುರದ ಅರಸಿನಕುಪ್ಪೆಯ ಶ್ರೀಮಂಜುನಾಥಸ್ವಾಮಿ ದೇವಾಲಯದಲ್ಲಿ ಫೆ. 26 ಮತ್ತು 27ರಂದು ಮಹಾಶಿವರಾತ್ರಿ ಆಚರಿಸಲಾಯಿತು.ಫೆ. 26ರಂದು ಬುಧವಾರ ಬೆಳಗ್ಗೆ 5 ಗಂಟೆಗೆ ಗಣಪತಿಹೋಮದೊಂದಿಗೆ ಶಿವರಾತ್ರಿ ಜಾತ್ರೋತ್ಸವ ಕ್ಷೇತ್ರದ ಗುರುಗಳಾದ ರಾಜೇಶ ನಾಥ್ ಗುರೂಜಿ ಅವರ ಮಾರ್ಗದರ್ಶನದಲ್ಲಿ, ಅರ್ಚಕ ಜಗದೀಶ ಉಡುಪ ಅವರ ಪೌರೋಹಿತ್ಯದಲ್ಲಿ ಆರಂಭವಾಯಿತು. ನಂತರ ಬೆಳಗ್ಗೆ 6 ಗಂಟೆಗೆ ಶ್ರೀಮಂಜುನಾಥಸ್ವಾಮಿಗೆ ಹಾಲಿನ ಅಭಿಷೇಕದೊಂದಿಗೆ ಪ್ರಥಮಯಾಮದ ಪೂಜೆ ನಡೆಯಲಿದೆ. ನಂತರ ಪ್ರತಿ ಮೂರು ಗಂಟೆಗೆ ಎಳನೀರು ಅಭಿಷೇಕ, ಕಬ್ಬಿನ ಹಾಲಿನಾಭಿಷೇಕ, ಪಂಚಾಮೃತ, ಜೇನುತುಪ್ಪದ ಅಭಿಷೇಕ, ಕೊನೆಗೆ ಭಸ್ಮಾಭಿಷೇಕ ನಡೆಯಿತು.
ಪ್ರತಿಯಾಮದಲ್ಲೂ ಏಕದಶಾವರ ರುದ್ರಾಭಿಷೇಕ ಮತ್ತು ರುದ್ರಾಭಿಷೇಕ ನಡೆಯಿತು. ಫೆ.27ರಂದು ಬೆಳಗ್ಗೆ ರುದ್ರಹೋಮ, 9.30ಕ್ಕೆ ಕಲಶಾಭಿಷೇಕ ನಂತರ 10ಗಂಟೆಗೆ ಪ್ರಯಾಗ್‌ರಾಜ್‌ನಿಂದ ಕ್ಷೇತ್ರದ ಪ್ರಧಾನಗುರು ರಾಜೇಶ್‌ನಾಥ್‌ಜಿ ತ್ರಿವೇಣಿ ಸಂಗಮದಿಂದ ತಂದಿರುವ ಮಹಾಕುಂಭ ತೀರ್ಥ, ಗಂಗಾ ತೀರ್ಥದೊಂದಿಗೆ ಕಾವೇರಿ ತೀರ್ಥ ಹಾಗೂ ಶೃಂಗೇರಿಯ ತುಂಗಾನದಿಯ ತೀರ್ಥ ಸೇರಿದಂತೆ ಪಂಚ ತೀರ್ಥದಿಂದ ಭಕ್ತಾದಿಗಳಿಗೆ ತೀರ್ಥಸ್ನಾನವನ್ನು ಮಾಡಿಸಲಾಯಿತು. ನಂತರ ಶ್ರೀ ಮಂಜುನಾಥಸ್ವಾಮಿ ಮತ್ತು ಪರಿವಾರ ದೇವರಿಗೆ ಮಹಾನೈವೇದ್ಯ ಮತ್ತು ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು.ಸೋಮವಾರಪೇಟೆಯ ವಿರಕ್ತ ಮಠದ ಪೀಠಾಧಿಪತಿ ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕ್ಷೇತ್ರದ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವ ಅಧ್ಯಕ್ಷ ನಾಪಂಡ ಮುದ್ದಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದಲ್ಲಿ ಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು.ಎರಡು ದಿನಗಳ ಮಹಾಶಿವರಾತ್ರಿ ಉತ್ಸವದಲ್ಲಿ ಕುಶಾಲನಗರ ಹಾಗೂ ದೇವಾಲಯದ ಭಕ್ತಾದಿಗಳಿಂದ ಭಜನೆಗಳು ನಡೆಯಿತು.