ಇಂದಿನಿಂದ ಮಾಲೂರಲ್ಲಿ ಎರಡು ದಿನ ರಾಜ್ಯಮಟ್ಟದ ಎಲ್ಐಸಿ ಸಮ್ಮೇಳನ

| Published : Oct 08 2025, 01:00 AM IST

ಸಾರಾಂಶ

ಮಿಶ್ರಣ ಲೈಸೆನ್ಸ್ ಪದ್ಧತಿ, ಖಾಸಗಿ ವಿಮಾ ಕಂಪನಿಗಳಿಗೆ ಭದ್ರತಾ ಠೇವಣಿ ಕಡಿತಗೊಳಿಸುವ, ೨೦೪೭ರ ಹೊತ್ತಿಗೆ ಎಲ್ಲರಿಗೂ ವಿಮೆ ಎನ್ನುವ ಹೆಸರಿನಲ್ಲಿ ಈಗಿರುವ ವಿಮಾ ವ್ಯವಸ್ಥೆಯನ್ನು ಅಸ್ಥಿರಗೊಳಿಸಿ ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರದ ನೀತಿಗಳನ್ನು ಜಾರಿಗೆ ತರಲು ಹೊರಟಿದೆ. ಇದನ್ನು ಎದುರಿಸಲು ಎಲ್‌ಐಸಿ ಉಳಿಸಿ, ಪಾಲಿಸಿದಾರರ ಹಿತ ಕಾಪಾಡಿ, ಪ್ರತಿನಿಧಿಗಳನ್ನು ರಕ್ಷಿಸಲು ಮುಂಬರುವ ದಿನಗಳಲ್ಲಿ ಜನಾಂದೋಲನ ಮೂಲಕ ಚರ್ಚಿಸಲಾಗುವುದು .

ಕನ್ನಡಪ್ರಭ ವಾರ್ತೆ ಮಾಲೂರು

ಎಲ್‌ಐಸಿಯನ್ನು ಸಾರ್ವಜನಿಕ ಸೇವಾ ವಲಯದಲ್ಲಿ ಉಳಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿಮಾ ಪ್ರತಿನಿಧಿಗಳ ಸಂಘಟನೆಯು ರಾಜ್ಯಮಟ್ಟದ 7ನೇ ಸಮ್ಮೇಳನವನ್ನು ಅಕ್ಟೋಬರ್ 8 ಮತ್ತು 9 ರಂದು ಮಾಲೂರು ನಗರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ ಎಂದು ಎಲ್‌ಐಸಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಲ್.ಮಂಜುನಾಥ್ ತಿಳಿಸಿದರು.

ಅವರು ನಗರದ ಪತ್ರಕರ್ತರ ಭವನದಲ್ಲಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಒಂದು ಕುಟುಂಬದಿಂದ 5 ಲಕ್ಷ ರು. ವಾರ್ಷಿಕವಾಗಿ ಪ್ರೀಮಿಯಂ ತುಂಬುವ ಎಲ್ಲಾ ಪಾಲಿಸಿಗಳಿಗೆ ಅವಧಿಯ ನಂತರ ಮೆಚ್ಯೂರಿಟಿ ಹಣಕ್ಕೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಎಲ್ಲಾ ಬದಲಾವಣೆಗಳು ಸಂಸ್ಥೆಯನ್ನು ಖಾಸಗೀಕರಣ ಗೊಳಿಸಲು ಪ್ರಾರಂಭವಾಗಿಸಿದೆ. ನಮ್ಮ ಸಂಘಟನೆ ೨೦೦೬ ರಿಂದ ೨೦೨೫ ರವರೆಗೆ ೩ ಬಾರಿ ಸಂಸತ್ ಚಲೋ, ಮೂರು ಬಾರಿ ಐಆರ್‌ಡಿಎಐ ಮುಂದೆ ಪ್ರತಿಭಟನೆ, ನಾಲ್ಕು ಬಾರಿ ಎಲ್‌ಐಸಿ ಕೇಂದ್ರ ಕಚೇರಿ ಮುಂದೆ, ೧೦ ಬಾರಿ ವಲಯ ಕಚೇರಿ ಮುಂದೆ ಹಾಗೂ ೬೩ ಬಾರಿ ಶಾಖೆಗಳ ಮುಂದೆ ನಿರಂತರ ಹೋರಾಟ ನಡೆಸಿದ್ದ ಫಲವಾಗಿ ಸೆಪ್ಟೆಂಬರ್ ೨೨ ರಂದು ಎಲ್‌ಐಸಿ ಪಾಲಿಸಿಗಳ ಮೇಲೆ ವಿಧಿಸುವ ಜಿ ಎಸ್ ಟಿ ಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಆದರೆ ೧ ಲಕ್ಷ, ೨೭ ಸಾವಿರ ಕೋಟಿ ರು. ಹಣವನ್ನು ಜನರಿಂದ ಜಿ ಎಸ್ ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸಿ ಮೋಸ ಮಾಡಿದೆ ಎಂದು ಆರೋಪಿಸಿದರು.

ಇನ್ನೂ ಅನೇಕ ಸವಾಲುಗಳಾಗಿ ಮಿಶ್ರಣ ಲೈಸೆನ್ಸ್ ಪದ್ಧತಿ, ಖಾಸಗಿ ವಿಮಾ ಕಂಪನಿಗಳಿಗೆ ಭದ್ರತಾ ಠೇವಣಿ ಕಡಿತಗೊಳಿಸುವ, ೨೦೪೭ರ ಹೊತ್ತಿಗೆ ಎಲ್ಲರಿಗೂ ವಿಮೆ ಎನ್ನುವ ಹೆಸರಿನಲ್ಲಿ ಈಗಿರುವ ವಿಮಾ ವ್ಯವಸ್ಥೆಯನ್ನು ಅಸ್ಥಿರಗೊಳಿಸಿ ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರದ ನೀತಿಗಳನ್ನು ಜಾರಿಗೆ ತರಲು ಹೊರಟಿದೆ. ಇದನ್ನು ಎದುರಿಸಲು ಎಲ್‌ಐಸಿ ಉಳಿಸಿ, ಪಾಲಿಸಿದಾರರ ಹಿತ ಕಾಪಾಡಿ, ಪ್ರತಿನಿಧಿಗಳನ್ನು ರಕ್ಷಿಸಲು ಮುಂಬರುವ ದಿನಗಳಲ್ಲಿ ಜನಾಂದೋಲನ ಮೂಲಕ ಚರ್ಚಿಸಲಾಗುವುದು ಎಂದರು.

ರಾಜ್ಯಮಟ್ಟದ ೭ನೇ ಸಮ್ಮೇಳನಕ್ಕೆ ಎಂಟು ವಿಭಾಗಗಳಾದ ಮೈಸೂರು, ರಾಯಚೂರು, ಉಡುಪಿ, ಧಾರವಾಡ, ಬೆಳಗಾಂ, ಶಿವಮೊಗ್ಗ ಮತ್ತು ಬೆಂಗಳೂರು ೧ ಮತ್ತು ೨ ಸೇರಿದಂತೆ ಆಯ್ದ ೩೦೦ ಜನ ಪ್ರತಿನಿಧಿಗಳು ಇಲ್ಲಿ ನಡೆಯುವ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎರಡು ದಿನಗಳ ಸಮ್ಮೇಳನದ ಕಾರ್ಯ ಕಲಾಪಗಳಲ್ಲಿ ಕೇಂದ್ರ ಸರ್ಕಾರ ಎಲ್‌ಐಸಿ ಪ್ರತಿನಿಧಿಗಳ ಪಿಂಚಣಿ ಭದ್ರತೆ ಎಫ್‌ಡಿಟಿ ನೀತಿ ನಿಲ್ಲಿಸಬೇಕು, ಷೇರು ಮಾರಾಟ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.

ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ಗೌರವಾಧ್ಯಕ್ಷ ಪಿ.ಎನ್.ಪರಮೇಶ್, ಸ್ವಾಗತ ಸಮಿತಿಯ ಅಧ್ಯಕ್ಷ ಅಶ್ವತ್ಥರೆಡ್ಡಿ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ, ರಾಜ್ಯ ಕಾರ್ಯಾಧ್ಯಕ್ಷ ಬಿ.ಜಯರಾಮ್, ಸಂಚಾಲಕ ವಾಲಿ ಮಯುದ್ದೀನ್, ಖಜಾಂಚಿ ಬಿ,ಆರ್. ಹರಿನಾಥ್ ಗುಪ್ತ, ತಾಲೂಕು ಅಧ್ಯಕ್ಷ ಆರ್.ನಾರಾಯಣರೆಡ್ಡಿ, ತಾಲೂಕು ಪ್ರಧಾನ ಕಾರ್ಯದರ್ಶಿ ವಿ.ಮುನಿವೆಂಕಟಪ್ಪ, ಹೆ.ಲಿಂ.ಮಹೇಶ್‌ ಪಡುಕೋಟೆ . ಸೋಮಶೇಖರ್, ಇನ್ನಿತರರು ಹಾಜರಿದ್ದರು.