ವಿಶ್ವಕರ್ಮ ಸಮಾಜ ಇಲ್ಲದೇ ಹೋಗಿದ್ದರೆ ಈ ಜಗತ್ತಿಗೆ ಭಾರತೀಯ ಸಂಸ್ಕೃತಿಯ ಪರಿಚಯವೇ ಆಗುತ್ತಿರಲಿಲ್ಲ. ಅಂತಹ ಶಕ್ತಿಯುತ ಸಮಾಜವಾಗಿದ್ದರೂ ಪರಸ್ಪರ ಸಹಕಾರದ ಕೊರತೆ ಸಂಘಟನೆಯ ಕೊರತೆಯಿಂದ ತುಳಿತಕ್ಕೆ ಒಳಗಾಗಿ ಕನಿಷ್ಟ ಸ್ಥಿತಿಯಲ್ಲಿದೆ ಎಂದು ಸಜಿಪಮೂಡ ಸರ್ಕಾರಿ ಪಿಯು ಕಾಲೇಜಿನ ವಿಜ್ಞಾನ ಉಪನ್ಯಾಸಕ ವೆಂಕಟ್ರಮಣ ಆಚಾರ್ಯ ಹೇಳಿದರು.

ಪುತ್ತೂರು : ವಿಶ್ವಕರ್ಮ ಸಮಾಜ ಇಲ್ಲದೇ ಹೋಗಿದ್ದರೆ ಈ ಜಗತ್ತಿಗೆ ಭಾರತೀಯ ಸಂಸ್ಕೃತಿಯ ಪರಿಚಯವೇ ಆಗುತ್ತಿರಲಿಲ್ಲ. ಅಂತಹ ಶಕ್ತಿಯುತ ಸಮಾಜವಾಗಿದ್ದರೂ ಪರಸ್ಪರ ಸಹಕಾರದ ಕೊರತೆ ಸಂಘಟನೆಯ ಕೊರತೆಯಿಂದ ತುಳಿತಕ್ಕೆ ಒಳಗಾಗಿ ಕನಿಷ್ಟ ಸ್ಥಿತಿಯಲ್ಲಿದೆ ಎಂದು ಸಜಿಪಮೂಡ ಸರ್ಕಾರಿ ಪಿಯು ಕಾಲೇಜಿನ ವಿಜ್ಞಾನ ಉಪನ್ಯಾಸಕ ವೆಂಕಟ್ರಮಣ ಆಚಾರ್ಯ ಹೇಳಿದರು.ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.

ರಾಜಕೀಯ ಅಧಿಕಾರ ದೂರ: ಬ್ರಹ್ಮಾಂಡದ ಸಾರ್ವತ್ರಿಕತೆಯನ್ನು ಸಾರುವ ಸೃಷ್ಟಿಕರ್ತ ದೇವಶಿಲ್ಪಿ ಮೂಲ ಪುರುಷನಾದ ವಿಶ್ವಕರ್ಮನಾಗಿದ್ದು, ಈ ವಂಶದ ವಿಶ್ವಕರ್ಮ ಸಮಾಜ ಮಾತ್ರ ಇಂದು ಜ್ಞಾನವನ್ನು ಗುಡಿಯಲ್ಲಿಟ್ಟು ತಂತ್ರಜ್ಞಾನದ ಬೆನ್ನು ಹತ್ತಿ ಪರದಾಟ ನಡೆಸುತ್ತಿದೆ. ದೇಶದಲ್ಲಿ ಸುಮಾರು ೧ ಕೋಟಿಯಷ್ಟು ಜನಸಂಖ್ಯೆ ಇದ್ದರೂ ರಾಜಕೀಯ ಅಧಿಕಾರದಿಂದ ಈ ಸಮಾಜ ಹೊರತಾಗಿದೆ. ಈ ಸಮಾಜಕ್ಕೆ ಧ್ವನಿಯಾಗಬೇಕಾದ ವಿಶ್ವಕರ್ಮ ಸಮಾಜ ಶಕ್ತಿಹೀನವಾಗಿ ಬಿಟ್ಟಿದೆ. ಕಲ್ಲನ್ನೂ ಭಕ್ತಿಯ ನೆಲೆಯಾಗಿಸುವ ಶಕ್ತಿ ಇರುವ ವಿಶ್ವಕರ್ಮ ಸಮಾಜವನ್ನು ಹಿಂದಕ್ಕೆ ತಳ್ಳುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅತೀ ಹೆಚ್ಚು ಗುರುಪರಂಪರೆ-ಗುರುಮಠ ಹೊಂದಿದ್ದರೂ ವಿಶ್ವಕರ್ಮ ಸಮಾಜದ ಬದುಕಿನಲ್ಲಿ ಕನಿಷ್ಠ ಬದಲಾವಣೆಯ ಗಾಳಿ ಬೀಸಿಲ್ಲ. ನಾವು ವಿಶ್ವಬ್ರಾಹ್ಮಣ ಎಂದು ಸಾಬೀತು ಪಡಿಸಲು ನ್ಯಾಯಾಲಯಕ್ಕೇ ಹೋಗಬೇಕಾಯಿತು ಎಂದ ಅವರು ವಿಶ್ವಕರ್ಮರಿಗಿರುವ ಶಕ್ತಿಯ ಉದ್ದೀಪನ ಸಾಧ್ಯವಾಗಿಲ್ಲ. ಗೋಡೆಯಲ್ಲಿ ಚಿತ್ರ ಬಿಡಿಸುವವರೆಲ್ಲಾ ವಿಶ್ವಕರ್ಮರಾಗಲು ಸಾಧ್ಯವಿಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿಯುವ ಅತ್ಯಂತ ಶ್ರೇಷ್ಟ ಹಾಗೂ ಸೃಜನಶೀಲ ಸಮಾಜವಾದ ವಿಶ್ವಕರ್ಮ ಸಮಾಜ ಶಿಕ್ಷಣದತ್ತ ಹೆಚ್ಚು ಒಲವು ಬೆಳೆಸಿಕೊಳ್ಳಬೇಕಾಗಿದೆ. ಬದುಕಿನ ಅಜ್ಞಾನ ತೊಡೆದು ಹಾಕಲು ವಿದ್ಯೆಯಿಂದ ಮಾತ್ರ ಸಾಧ್ಯವಾಗುತ್ತದೆ. ಕೇವಲ ಕುಟುಂಬದ ಬಗ್ಗೆ ಮಾತ್ರವಲ್ಲ ತಮ್ಮ ಸಮಾಜದ ಬಗ್ಗೆಯೂ ಚಿಂತನೆ ಮಾಡುವ ಮನೋಭಾವವನ್ನು ವಿಶ್ವಕರ್ಮ ಸಮಾಜ ಬೆಳೆಸಿಕೊಳ್ಳಬೇಕು. ಸಂಕುಚಿತ ಮನೋಭಾವವನ್ನು ದೂರೀಕರಿಸಿಕೊಂಡು ಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.ವೇದಿಕೆಯಲ್ಲಿ ನಗರಸಭಾ ಪೌರಾಯುಕ್ತೆ ವಿದ್ಯಾ ಎಂ ಕಾಳೆ, ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ ಆಚಾರ್ಯ ಎಸ್.ಎನ್ ಉಪಸ್ಥಿತರಿದ್ದರು. ತಾಲೂಕು ಕಚೇರಿ ವಿಷಯನಿರ್ವಾಹಕ ದಯಾನಂದ ಡಿ.ಟಿ ಸ್ವಾಗತಿಸಿದರು. ಉಪತಹಸೀಲ್ದಾರ್ ರವಿಕುಮಾರ್ ನಾಡಗೀತೆ ಹಾಡಿದರು. ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಮಹೇಶ್, ಗ್ರಾಮ ಆಡಳಿತಾಧಿಕಾರಿ ಮಹೇಶ್, ಸಹಾಯಕ ಆಯುಕ್ತರ ಕಚೇರಿಯ ಪ್ರತೀಕ್ಷಾ ಸಹಕರಿಸಿದರು. ಶ್ರೀಕಲಾ ಕಾರಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.