ಸಾರಾಂಶ
ಹಾವೇರಿ: ಬೆಳಗಾವಿ ಜಿಲ್ಲೆ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮೂಲಕ ಹಾವೇರಿ ಮೆಡಿಕಲ್ ಕಾಲೇಜಿಗೆ, ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆಂದು ಎರಡು ಮೃತದೇಹಗಳನ್ನು ದಾನ ನೀಡಲಾಯಿತು.ಹಾವೇರಿ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ೧೫೦ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಹ ರಚನಾ ಶಾಸ್ತ್ರದ ಅಧ್ಯಯನಕ್ಕಾಗಿ ಮೃತದೇಹಗಳ ಅವಶ್ಯಕತೆ ಇದ್ದು, ಅದನ್ನು ಮನಗಂಡ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್‌ಜಿವಿ ಆಯುರ್ವೇದ ಮಹಾವಿದ್ಯಾಲಯ ವತಿಯಿಂದ ಈ ದೇಹಗಳನ್ನು ನೀಡಲಾಗಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಂದ್ರಶೇಖರ ಬಸಪ್ಪ ಬಾಡಗಿ (೮೦) ಹಾಗೂ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಶಾರದಾ ಗಂಗಯ್ಯ ಮಠ (೭೯) ಮೃತರಾಗಿದ್ದು, ಅವರ ಕುಟುಂಬಸ್ಥರು ಈ ಮೃತದೇಹಗಳನ್ನು ಅಧ್ಯಯನಕ್ಕೆಂದೇ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ಗೆ ನೀಡಿದ್ದರು. ಇದೀಗ ಅವರ ಮೃತದೇಹಗಳನ್ನು ವೈದ್ಯ ವಿದ್ಯಾರ್ಥಿಗಳ ಶರೀರದ ಅಧ್ಯಯನ ಹಾಗೂ ಸಂಶೋಧನಕ್ಕೆ ಶರೀರ ರಚನಾ ವಿಭಾಗಕ್ಕೆ ದಾನವಾಗಿ ಡಾ.ಮಹಾಂತೇಶ್ ರಾಮಣ್ಣವರ ನೀಡಿದರು.ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಂಗ ರಚನಾ ವಿಭಾಗದ ಮುಖ್ಯಸ್ಥರು ಡಾ. ಪೂರ್ಣಿಮಾ, ದೇಹದಾನ ಮಾಡಿದ ಕುಟುಂಬದ ಸದಸ್ಯರು, ಡಾ. ಮಹಾಂತೇಶ ರಾಮಣ್ಣವರ, ಐ.ಆರ್. ಮಠಪತಿ, ವೈದ್ಯಕೀಯ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಮೃತದೇಹಗಳಿಗೆ ಮಾಲಾರ್ಪಣೆ ಮಾಡಿ ಧನ್ವಂತರಿ ಪ್ರಾರ್ಥನೆಯೊಂದಿಗೆ ಅಂಗ ರಚನಾ ವಿಭಾಗಕ್ಕೆ ಪಡೆದುಕೊಳ್ಳಲಾಯಿತು.ಈ ವೇಳೆ ದೇಹದಾನ ಜಾಗೃತಿಗಾಗಿ ತಂದೆಯ ಮೃತದೇಹ ಛೇದನ ಮಾಡಿ ವೈದ್ಯಕೀಯ ಇತಿಹಾಸ ಸೃಷ್ಟಿಸಿದ ಡಾ.ಮಹಾಂತೇಶ ರಾಮಣ್ಣವರ, ಫೊರೆನ್ಸಿಕ್ ಮೆಡಿಸಿನ್ ಮುಖ್ಯಸ್ಥ ಡಾ. ಸುನಿಲ್ ಅರಮನೆ, ಔಷಧಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನವೀನ ಕುಮಾರ ಸಿಬ್ಬಂದಿ ವರ್ಗ ಮತ್ತು ಪ್ರಥಮ ವರ್ಷದ ಎಂಬಿಬಿಎಸ್ ವೈದ್ಯ ವಿದ್ಯಾರ್ಥಿಗಳು ಇದ್ದರು.