ಪೈಪ್‌ ಬಿದ್ದು ಇಬ್ಬರ ಸಾವು, ಒಬ್ಬನಿಗೆ ಗಾಯ

| Published : May 22 2025, 11:50 PM IST

ಪೈಪ್‌ ಬಿದ್ದು ಇಬ್ಬರ ಸಾವು, ಒಬ್ಬನಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಅಮೃತ ಯೋಜನೆಯಡಿ ನೀರು ಸರಬರಾಜು ಕಾಮಗಾರಿಯ ಪೈಪ್ ಇಳಿಸುವ ವೇಳೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿದ್ದು, ಓರ್ವ ಯುವಕ ಗಂಭೀರ ಗಾಯಗೊಂಡ ಘಟನೆ ಕುಷ್ಟಗಿ ಪಟ್ಟಣದ ಇಂಡಸ್ಟ್ರೀಯಲ್ ಏರಿಯಾದಲ್ಲಿ ಗುರುವಾರ ಸಂಜೆ ನಡೆದಿದೆ.

ಕುಷ್ಟಗಿ:

ಅಮೃತ ಯೋಜನೆಯಡಿ ನೀರು ಸರಬರಾಜು ಕಾಮಗಾರಿಯ ಪೈಪನ್ನು ಲಾರಿಯಿಂದ ಇಳಿಸುವ ವೇಳೆ ಅದು ಕಾರ್ಮಿಕರ ಮೇಲೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿದ್ದು, ಓರ್ವ ಯುವಕ ಗಂಭೀರ ಗಾಯಗೊಂಡ ಘಟನೆ ಪಟ್ಟಣದ ಇಂಡಸ್ಟ್ರೀಯಲ್ ಏರಿಯಾದಲ್ಲಿ ಗುರುವಾರ ಸಂಜೆ ನಡೆದಿದೆ.

ಮೃತಪಟ್ಟ ಯುವಕರನ್ನು ಇಲಕಲ್ಲ ಮೂಲದ ಬೀರಪ್ಪ ಡೋಂಗ್ರೆಪ್ಪ ಇದ್ಲಾಪುರು (18) ಹಾಗೂ ಕನಕಗಿರಿ ತಾಲೂಕಿನ ಓಬಳಬಂಡಿ ನಿವಾಸಿ ಶರಣಪ್ಪ ಶಿವಪ್ಪ ಗಡಾದ (25) ಎಂದು ಗುರುತಿಸಲಾಗಿದೆ. ವಿಜಯಪುರ ಮೂಲದ ರಾಜು ರಾಠೋಡ (28) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಅಮೃತ ಯೋಜನೆಯಡಿ ಕಾಮಗಾರಿ ಸಲುವಾಗಿ ಕುಷ್ಟಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಇಂಡಸ್ಟ್ರೀಯಲ್ ಏರಿಯಾದ ಖಾಲಿ ಜಾಗದಲ್ಲಿ ಲಾರಿಯಿಂದ ಪೈಪ್‌ ಇಳಿಸಬೇಕಿತ್ತು. ಪೈಪ್‌ಗಳಿಗೆ ಕಟ್ಟಿರುವ ಹಗ್ಗ ಕೊಯ್ಯುವ ಸಂದರ್ಭದಲ್ಲಿ ಹಗ್ಗ ತುಂಡಾಗಿ ಪೈಪ್‌ಗಳು ಕಾರ್ಮಿಕರ ಮೇಲೆ ಬಿದ್ದಿವೆ.

ಶಾಸಕ ಭೇಟಿ:

ಘಟನಾ ಸ್ಥಳಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೃತ-2 ಯೋಜನೆಯಡಿ ಸಿಂದಗಿ, ಕುಷ್ಟಗಿ ಹಾಗೂ ಮುದ್ದೇಬಿಹಾಳ ತಾಲೂಕಿನಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಲಾಗುವುದು. ಗಾಯಗೊಂಡ ವ್ಯಕ್ತಿ ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದರು. ಆನಂತರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಕುಷ್ಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.