ಸಾರಾಂಶ
ಮಂಗನ ಕಾಯಿಲೆಯಿಂದಾಗಿ ಈ ಬಾರಿ ತಾಲೂಕಿನಲ್ಲಿ ಎರಡು ಸಾವು ಕೂಡಾ ಸಂಭವಿಸಿರುವುದು ಆತಂಕಕಾರಿ ಸಂಗತಿಯಾಗಿದೆ. ಅದರಲ್ಲೂ ಮುಖ್ಯವಾಗಿ ದತ್ತರಾಜಪುರದ ಬಾಲಕ ಈ ಸೋಂಕಿಗೆ ತುತ್ತಾಗಿರುವ ಘಟನೆ ಹೃದಯ ಕಲಕುವಂತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ಆಶಾಕಿರಣ ದೃಷ್ಟಿ ಕೇಂದ್ರ ಆರಂಭ
ತೀರ್ಥಹಳ್ಳಿ: ಮಂಗನ ಕಾಯಿಲೆಯಿಂದಾಗಿ ಈ ಬಾರಿ ತಾಲೂಕಿನಲ್ಲಿ ಎರಡು ಸಾವು ಕೂಡಾ ಸಂಭವಿಸಿರುವುದು ಆತಂಕಕಾರಿ ಸಂಗತಿಯಾಗಿದೆ. ಅದರಲ್ಲೂ ಮುಖ್ಯವಾಗಿ ದತ್ತರಾಜಪುರದ ಬಾಲಕ ಈ ಸೋಂಕಿಗೆ ತುತ್ತಾಗಿರುವ ಘಟನೆ ಹೃದಯ ಕಲಕುವಂತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.ನಗರದಲ್ಲಿ ಶನಿವಾರ ಸಂಜೆ ಪಟ್ಟಣದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಆರಂಭಿಸಲಾದ ಆರೋಗ್ಯ, ಕುಟುಂಬ ಕಲ್ಯಾಣ ಯೋಜನೆಯಡಿ ತಾಲೂಕಿಗೆ ಮಂಜೂರಾದ ಆಶಾಕಿರಣ ದೃಷ್ಟಿಕೇಂದ್ರದಲ್ಲಿ ಸ್ವತಃ ದೃಷ್ಟಿ ಪರೀಕ್ಷೆ ಮಾಡಿಸಿಕೊಂಡು ಉದ್ಘಾಟಿಸಿ ಮಾತನಾಡಿ, ತ್ರಿಯಂಬಕಪುರ ಮತ್ತು ಹೆದ್ದೂರು ಭಾಗದಲ್ಲಿ ಈ ಸೋಂಕು ಹೆಚ್ಚು ಜನರನ್ನು ಬಾಧಿಸುತ್ತಿದ್ದು ಜ್ವರದ ಲಕ್ಷಣ ಕಾಣುತ್ತಿದ್ದಂತೆ ಅವರನ್ನು ಬಲವಂತವಾಗಿ ಸರ್ಕಾರಿ ಆಸ್ಪತ್ರೆಗೆ ಕರೆತರಬೇಕಿದೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಉಪ ಕೇಂದ್ರಗಳನ್ನು ಸ್ಥಾಪಿಸಿ ಆಶಾ ಕಾರ್ಯಕರ್ತರ ನೆರವಿನೊಂದಿಗೆ ಕಾಯಿಲೆ ನಿಯಂತ್ರಣದ ಬಗ್ಗೆ ಕಟ್ಟೆಚ್ಚರ ವಹಿಸಬೇಕು. ಕೆಎಫ್‍ಡಿ ನಿಯಂತ್ರಣದ ಸಲುವಾಗಿ ಹೆಚ್ಚುವರಿಯಾಗಿ ಒಂದು ಆ್ಯಂಬುಲೆನ್ಸ್ ವಾಹನವನ್ನು ಒದಗಿಸದಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಖಾರವಾಗಿ ಪ್ರತಿಕ್ರಯಿಸಿದರು.ಅಂಧತ್ವ ನಿವಾರಣೆ ಯೋಜನೆಯಡಿ ಜೆಸಿ ಆಸ್ಪತ್ರೆಯಲ್ಲಿ ಜನರಿಗೆ ಆಧುನಿಕ ಸವಲತ್ತು ನೀಡುವ ಸಲುವಾಗಿ 4.25 ಲಕ್ಷ ರು. ವೆಚ್ಚದಲ್ಲಿ ಎರಡು ಆಧುನಿಕ ತಂತ್ರಜ್ಞಾನದ ಯಂತ್ರ ಖರೀದಿಸಲಾಗಿದೆ. ಆಸ್ಪತ್ರೆಯ ಲ್ಯಾಬ್ ಅನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು 50 ಲಕ್ಷ ರು. ವೆಚ್ಚದಲ್ಲಿ ಆಸ್ಪತ್ರೆಯ ಮಹಡಿಯ ಮೇಲೆ ವ್ಯವಸ್ಥಿತವಾದ ಕಟ್ಟಡ ಶೀಘ್ರದಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.
ಜೆಸಿ ಆಸ್ಪತ್ರೆ ವೈಧ್ಯಾಧಿಕಾರಿ ಡಾ.ಗಣೇಶ್ ಭಟ್, ಹಿರಿಯ ವೈದ್ಯರಾದ ಡಾ.ನಿಶ್ಚಲ್, ಡಾ.ಪ್ರಭಾಕರ್, ಡಾ.ಮಹಿಮಾ, ಆರೋಗ್ಯ ರಕ್ಷಾ ಸಮಿತಿಯ ದೇವರಾಜ್, ಕಿಶೋರ್, ಪೂರ್ಣಿಮಾ, ವಿಶ್ವನಾಥ,ರಮೇಶ್ ನಾಯ್ಕ್, ವಾಸುದೇವ ಕಾಮತ್ ಇದ್ದರು.