ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ಪ್ರತಿ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರುತ್ತಾರೆ

ಕೊಪ್ಪಳ: ತಾಪಮಾನ ಹೆಚ್ಚಿದ್ದು, ಅಂಜನಾದ್ರಿ ಬೆಟ್ಟವನ್ನು ಮಧ್ಯಾಹ್ನ ಉರಿಬಿಸಿಲಿನಲ್ಲಿ ಏರುವುದರಿಂದ ಕೆಲವರ ಆರೋಗ್ಯ ಏರುಪೇರಾಗುತ್ತಿದೆ. ಹೀಗಾಗಿ, ಅಂಜನಾದ್ರಿ ಬೆಟ್ಟ ಏರಲು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ನಿರ್ಬಂಧ ಹೇರಲಾಗಿದೆ.

ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಸಮಯ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಆದೇಶ ಹೊರಡಿಸಿದ್ದಾರೆ.

ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ಪ್ರತಿ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರುತ್ತಾರೆ. ಕಳೆದ 2ರಿಂದ 3 ತಿಂಗಳಿನಲ್ಲಿ ಇಬ್ಬರು ಭಕ್ತರು ದೇವಸ್ಥಾನದ 575 ಮೆಟ್ಟಿಲುಗಳನ್ನು ಏರಿ ಮೇಲೆ ಹೋದ ಆನಂತರ ಉಸಿರಾಡಲು ತೊಂದರೆಯಾಗಿ ಮೃತಪಟ್ಟಿದ್ದಾರೆ. ಏ. 1ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆಂಜನೇಯ ದೇವಸ್ಥಾನದ ಗರ್ಭಗುಡಿಯಲ್ಲಿ ಕುಳಿತು ದರ್ಶನ ಪಡೆದ ಬಳಿಕ ಭಕ್ತನೊಬ್ಬ ಬಿಸಿಲಿನ ತಾಪದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಅಂಜನಾದ್ರಿ ದೇವಸ್ಥಾನದ ಸುತ್ತಮುತ್ತ ಸಂಪೂರ್ಣ ಕಲ್ಲು-ಬಂಡೆಗಳಿವೆ. ಬಿಸಿಲಿನ ಝಳಕ್ಕೆ ಅವು ಕಾದು, ಹೆಚ್ಚಿನ ಶಾಖ ಬಿಡುಗಡೆ ಮಾಡುತ್ತವೆ. ಅದರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಲ್ಲದೇ ಭಕ್ತರು ಬಿಸಿಲಿನಲ್ಲಿ ದೇವಸ್ಥಾನದ ಸುಮಾರು 575 ಮೆಟ್ಟಿಲುಗಳನ್ನು ಏರುವುದರಿಂದ ಅವರು ಸುಸ್ತಾಗಿ, ಉಸಿರಾಟದ ತೊಂದರೆ ಉಂಟಾಗಿ ಅಸ್ವಸ್ಥರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ಅವಧಿಯಲ್ಲಿ ದೇವಸ್ಥಾನದ ಮೆಟ್ಟಿಲು ಏರಿ ಹೋಗಿ ದರ್ಶನ ಪಡೆಯುವುದನ್ನು ನಿಷೇಧ ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೋರಿದ್ದರು.

ಕೊಪ್ಪಳ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿರುವುದನ್ನು ಗಮನಿಸಿ, ದೇವಸ್ಥಾನದ ದರ್ಶನದ ಸಮಯ ಬದಲಾಯಿಸುವಂತೆ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸಹ ಕೋರಿದ್ದರು.

ಈ ಹಿನ್ನೆಲೆಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನಕ್ಕೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆ ವರೆಗೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆ ವರೆಗೆ ಮಾತ್ರ ಅವಕಾಶ ನೀಡಲಾಗಿದೆ.