ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜೋತುಬಿದ್ದ ವಿದ್ಯುತ್ ಲೇನ್‌ನಿಂದಾಗಿ ಜಮೀನಿಗೆ ತೆರಳುತ್ತಿದ್ದ ರೈತರು ಧಾರುಣವಾಗಿ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಚಾಮರಾಜನಗರ ತಾಲೂಕಿನ ಅಯ್ಯನಪುರ ಗ್ರಾಮದ ನಾಗೇಂದ್ರ (45) ಮಲ್ಲೇಶ (48) ಮೃತ ರೈತರು ಬುಧವಾರ ರಾತ್ರಿ ತಮ್ಮ ಜಮೀನಿಗೆ ಅಯ್ಯನಪುರ ಗ್ರಾಮದಿಂದ ಇತ್ತಲಗುಡ್ಡೆ ಮಾರ್ಗದ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುವಾಗ ಜೋತುಬಿದ್ದಿದ್ದ ವಿದ್ಯುತ್ ಲೇನ್ ಕುತ್ತಿಗೆಗೆ ಬಿಗಿದು ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ.ಬೆಳಗ್ಗೆ ಆದರೂ ರೈತರು ಮನೆಗೆ ವಾಪಾಸ್ ಬರದಿದ್ದರಿಂದ ಪರಿಶೀಲಿಸಿದ ವೇಳೆ ವಿದ್ಯುತ್ ತಂತಿಗೆ ಸಿಲುಕಿ ಅಸುನೀಗಿರುವುದು ಬೆಳಕಿಗೆ ಬಂದಿದೆ.ಗ್ರಾಮಸ್ಥರ ಆಕ್ರೋಶ: ಗ್ರಾಮಸ್ಥರು ಹಾಗೂ ಸ್ಥಳೀಯ ರೈತರು ಸೆಸ್ಕ್ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಸಿದರು, ವಿದ್ಯುತ್ ಲೇನ್‌ಗೆ ರೈತರು ಮೃತಪಟ್ಟಿರುವುದು ಸೆಸ್ಕ್ ಸಿಬ್ಬಂದಿ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಎಂದು ರೈತ ಸಂಘ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಆಕ್ರೋಶ ಹೊರಹಾಕಿದರು. ಎಷ್ಟೇ ಹಣ ಕೊಟ್ಟರೂ ರೈತರ ಜೀವ ವಾಪಾಸ್ ಬರುವುದಿಲ್ಲ, ಇದು ರೈತರ ಸಾವಲ್ಲ- ಸೆಸ್ಕ್ ಮಾಡಿರುವ ಕೊಲೆ ಎಂದು ಆಕ್ರೋಶ ಹೊರಹಾಕಿದರು.ಮೃತ ರೈತ ಕುಟುಂಬಕ್ಕೆ ವೈಜ್ಞಾನಿಕ ಪರಿಹಾರ ಕೊಡಬೇಕು, ಕುಟುಂಬದ ಒಬ್ಬರಿಗೆ ಉದ್ಯೋಗ ಕೊಡಬೇಕು ಹಾಗೂ ಸೆಸ್ಕ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ತಲಾ 5 ಲಕ್ಷ ಪರಿಹಾರ: ಘಟನಾ ಸ್ಧಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಅವರು ಭೇಟಿ ನೀಡಿ ಮೃತರ ಕುಟುಂಬಸ್ಧರಿಗೆ ಸಾಂತ್ವನ ಹೇಳಿದರು. ಬಳಿಕ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ವಿತರಣೆ ಮಾಡಿದರು. ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಮೃತದೇಹಗಳನ್ನು ಸಿಮ್ಸ್ ಆಸ್ಪತ್ರೆಗೆ ಕೊಂಡೋಯ್ದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.ಇಬ್ಬರ ಅಮಾನತು:ಚಾಮರಾಜನಗರ ತಾಲೂಕಿನ ಅಯ್ಯನಪುರ ಗ್ರಾಮದಲ್ಲಿ ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ರೈತರು ಮೃತಪಟ್ಟ ಸಂಬಂಧ ಕರ್ತವ್ಯಲೋಪದ ಹಿನ್ನೆಲೆ ಸೆಸ್ಕ್ ಜೂನಿಯರ್ ಎಂಜಿನಿಯರ್ ಮರಿಸ್ವಾಮಿ ಮತ್ತು ಲೈನ್‌ಮನ್ ಆನಂದ್ ಎಂಬವರನ್ನು ಅಮಾನತು ಮಾಡಲಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್ ತಿಳಿಸಿದರು.