ವಿಜಯನಗರ ಕಾಲದ ಎರಡು ದಾನ ಶಾಸನಗಳ ಪತ್ತೆ

| Published : Dec 01 2024, 01:35 AM IST

ಸಾರಾಂಶ

ಶಾಸನದಲ್ಲಿ ಕನ್ನಡ, ತೆಲುಗು, ತಮಿಳು ಮೂರು ಭಾಷೆಯ (ತ್ರಿಭಾಷಾ) ಲಿಪಿಯುಳ್ಳ ಶಾಸನ ಪತ್ತೆಯಾಗಿದೆ.

ಹೊಸಪೇಟೆ: ವಿಜಯನಗರ ಕಾಲದ ಎರಡು ಮಹತ್ವದ ದಾನ ಶಾಸನಗಳನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡ ಪತ್ತೆ ಮಾಡಿದೆ.

ಈ ಎರಡು ಶಾಸನಗಳಲ್ಲಿ ಗ್ರಾಮ ದೇವತೆಯರ ಹೆಸರು ಉಲ್ಲೇಖವಾಗಿವೆ. ಈ ಎರಡು ಶಾಸಗಳನ್ನು ತಾಲೂಕಿನ ಪಾಪಿನಾಯಕನಹಳ್ಳಿಯ ಅಂಕ್ಲೇಶ್, ಕಿರಣ್, ವಿ.ನಾಗಲಾಪುರದ ರಾಮಚಂದ್ರಪ್ಪ ಸಹಕಾರದಿಂದ ಸಂಶೋಧಕರಾದ ಎಚ್.ರವಿ, ಡಾ.ವೀರಾಂಜನೇಯ, ಪ್ರೊ.ತಿಪ್ಪೇಸ್ವಾಮಿ, ಡಾ. ಗೋವಿಂದ, ಕೃಷ್ಣೆಗೌಡ ಪತ್ತೆ ಹಚ್ಚಿದ್ದಾರೆ.

ಪಾಪಿನಾಯಕನ ಹಳ್ಳಿಯ ಗ್ರಾಮದೇವತೆಯಾದ ಅಂಕಲಮ್ಮದೇವಿಯ ದೇಗುಲದ ಎದುರಿಗೆ ಇರುವ ಹೊಲವೊಂದರಲ್ಲಿ ಪತ್ತೆಯಾದ ಶಾಸನದಲ್ಲಿ ಕನ್ನಡ, ತೆಲುಗು, ತಮಿಳು ಮೂರು ಭಾಷೆಯ (ತ್ರಿಭಾಷಾ) ಲಿಪಿಯುಳ್ಳ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಸ್ಥಳೀಯರು ಬಲಿಕಲ್ಲು ಎನ್ನುತ್ತಾರೆ. ದೇವಿಯ ಜಾತ್ರೆ ವೇಳೆ ಈ ಹಿಂದೆ ಗ್ರಾಮದೇವತೆಗೆ ಬಿಟ್ಟ ಕೋಣವನ್ನು ಈ ಕಲ್ಲಿಗೆ ಕಟ್ಟಿ ಬಲಿ ನೀಡುತ್ತಿದ್ದರಂತೆ. ಅಲ್ಲದೇ ದೇವಿಯ ಶಾಪದಿಂದ ಕಾಮುಕನೊಬ್ಬ ಕಲ್ಲಾದ ಎಂಬ ನಂಬಿಕೆಯೂ ಇದೆ. ಈ ಶಾಸನವು ವಕ್ರವಾದ ಗ್ರಾನೈಟ್ ಕಲ್ಲಿನಲ್ಲಿ ಬರೆಸಲಾಗಿದೆ. ಇದು ಬಿಸಿಲು ಮಳೆಯಿಂದಾಗಿ ಕೆಲವು ಸಾಲುಗಳ ಅಕ್ಷರಗಳು ಸವೆದು ಹೋಗಿವೆ. ಪೂರ್ವಕ್ಕೆ ಮುಖ ಮಾಡಿರುವ ಶಿಲಾಶಾಸನದಲ್ಲಿ 14 ಸಾಲುಗಳಿವೆ. ಈ ಶಾಸನದಲ್ಲಿ ಕನ್ನಡ ಲಿಪಿ ತೆಲುಗು ಭಾಷೆಯ ಸಾಲುಗಳನ್ನು ದಪ್ಪ ಅಕ್ಷರಗಳಲ್ಲಿ ಕೊರೆಸಲಾಗಿದೆ. ಇದರಲ್ಲಿನ ಕೊನೆಯ ಎರಡು ಸಾಲುಗಳಲ್ಲಿ ತಮಿಳು ಲಿಪಿಯ ಅಕ್ಷರಗಳಿವೆ. ಅವು ಸಹ ಸವೆದು ಹೋಗಿವೆ.

ಈ ಶಾಸನದ ಆರಂಭದಲ್ಲಿಯೇ ಶ್ರೀ ಎಂಬ ದೊಡ್ಡ ಅಕ್ಷರವಿದ್ದು, ಇದರ ಎಡಕ್ಕೆ ಚಂದ್ರ, ಬಲಕ್ಕೆ ಸೂರ್ಯನ ಚಿಹ್ನೆಗಳಿವೆ. ಅದರ ಕೆಳಗಿನ ಸಾಲುಗಳಲ್ಲಿಯ ಅಕ್ಷರಗಳು 3 ಇಂಚು ಅಗಲ 5 ಇಂಚು ಎತ್ತರವಾಗಿವೆ ಎಂದು ತಂಡದ ಸದಸ್ಯ ಡಾ.ಗೋವಿಂದ ತಿಳಿಸಿದ್ದಾರೆ.

ಮತ್ತೊಂದು ದಾನಶಾಸನವು ಕಾಕುಬಾಳು ಬಳಿಯ ವಿ.ನಾಗಲಾಪುರ ಗ್ರಾಮದ ಹೊರವಲಯದ ಬನ್ನಿಮಹಾಂಕಾಳಿ ದೇಗುಲದ ಬಳಿ ದೊರಕಿದೆ. ಈ ಶಾಸನವು ಪೂರ್ವಕ್ಕೆ ಮುಖಮಾಡಿದೆ. ಇದನ್ನು ಕಪ್ಪು ಗುಂಡುಕಲ್ಲಿನಲ್ಲಿ ಬರೆಸಲಾಗಿದೆ. ಈ ಶಾಸನದ ಮೇಲ್ಭಾಗದಲ್ಲಿ ಎಡಗಡೆ ಶಂಖ ಮತ್ತು ಬಲಗಡೆಗೆ ಚಕ್ರ ಹಾಗೂ ಮಧ್ಯಭಾಗದಲ್ಲಿ ವಿಶೇಷವಾಗಿ ಮೂರು ನಾಮದ ಚಿಹ್ನೆಗಳಿರುವುದರಿಂದ ಇದು ವೈಷ್ಣವ ಧರ್ಮವನ್ನು ಪ್ರತಿಪಾದಿಸುವ ದಾನ ಶಾಸನವಾಗಿದೆ. ಇದು ಒಂಬತ್ತು ಸಾಲಿನ ಕನ್ನಡ ಭಾಷೆಯ ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಈ ಶಾಸನದಲ್ಲಿ ಕಣಿವೆಯ ಮರಿಯಮ್ಮದೇವಿ, ಮುಕ್ತೇಶ್ವರ ದೇಗುಲಕ್ಕೆ ದಾನ ನೀಡಿದ ಬಗ್ಗೆ ವಿವರವಿದೆ. ಇಲ್ಲಿ ಉಲ್ಲೇಖವಾದ ಕಣಿವೆ ಮರಿಯಮ್ಮ ದೇಗುಲವು ಕಂಪ್ಲಿ ದೇವಲಾಪುರ ಮಾರ್ಗ ಮಧ್ಯದಲ್ಲಿದೆ. ಈ ಶಾಸನದಲ್ಲಿ ಬರೆಸಿರುವ ಒಂಬತ್ತು ಸಾಲುಗಳಲ್ಲಿನ ಕೆಲವು ಅಕ್ಷರಗಳು ಸವೆದು ಹೋಗಿವೆ.

ಪಾಪಿನಾಯಕನಹಳ್ಳಿ ಅಂಕಲಮ್ಮ ದೇಗುಲದ ಬಳಿಯ ತ್ರಿ ಭಾಷೆಯಲ್ಲಿರುವ ದಾನ ಶಾಸನ ಪತ್ತೆಯಾಗಿದೆ.