ಪ್ರತಿ ತಿಂಗಳು ಎರಡು ಉಚಿತ ಆರೋಗ್ಯ ತಪಾಸಣಾ ಶಿಬಿರ: ಡಾ. ಪ್ರಭಾ

| Published : Jul 21 2025, 12:00 AM IST

ಸಾರಾಂಶ

ಶಾಸಕ ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಉಚಿತ ಆರೋಗ್ಯ ಶಿಬಿರ ಮಾಡುವ ಸಂಕಲ್ಪ ಹೊಂದಿದ್ದು, ಆ ಪ್ರಕಾರ ಪ್ರತಿ ತಿಂಗಳು ಎರಡು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತೇವೆ.

ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿದ ಸಂಸದೆ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಶಾಸಕ ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಉಚಿತ ಆರೋಗ್ಯ ಶಿಬಿರ ಮಾಡುವ ಸಂಕಲ್ಪ ಹೊಂದಿದ್ದು, ಆ ಪ್ರಕಾರ ಪ್ರತಿ ತಿಂಗಳು ಎರಡು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತೇವೆ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಎಸ್‌ಎಸ್‌ ಕೇರ್‌ ಟ್ರಸ್ಟ್‌ನಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಮುಂದಿನ ತಿಂಗಳು ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಆಯೋಜಿಸುತ್ತೇವೆ ಎಂದ ಅವರು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಹೆರಿಗೆ ಮಾಡಿಸುವುದು, ಡಯಾಲಿಸಿಸ್‌ ಈ ಮೂರು ಕೆಲಸಗಳನ್ನು ಉಚಿತವಾಗಿ ಬಿಪಿಎಲ್‌ ಕಾರ್ಡ ಹೊಂದಿದವರಿಗೆ ಮಾಡಿಕೊಡುತ್ತೇವೆ. ಈಗಾಗಲೇ 20 ಸಾವಿರಕ್ಕಿಂತ ಹೆಚ್ಚು ಫಲಾನುಭವಿಗಳು ಎಸ್‌ಎಸ್‌ ಕೇರ್‌ ಟ್ರಸ್ಟ್‌ನ ಫಲಾನುಭವಿಗಳಾಗಿದ್ದಾರೆ ಎಂದು ನುಡಿದರು.

ಇದಲ್ಲದೆ ರಿಯಾಯಿತಿ ದರದಲ್ಲಿ ಬಾಪೂಜಿ ಆರೋಗ್ಯ ಕಾರ್ಡ ನೀಡುತ್ತೇವೆ. ಈ ಕಾರ್ಡನಲ್ಲಿ ಒಳರೋಗಿ ಸಾಮಾನ್ಯ ಕೊಠಡಿ, ಹೊರ ರೋಗಿ ಸಮಾಲೋಚನೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳಿಗೆ ಶೇ.20 ಹಾಗೂ ಶೇ.10 ರಷ್ಟು ರಿಯಾಯಿತಿ ದರ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಐಎಎಸ್‌, ಐಪಿಎಸ್‌, ಕೆಎಎಸ್‌ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮವಿದ್ದು, ಪ್ರವೇಶ ಪರೀಕ್ಷೆ ನಡೆಸಿ ಅದರಲ್ಲಿ 300 ಜನರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಗೃಹ ಆರೋಗ್ಯ ಎಂಬ ಕಾರ್ಯಕ್ರಮವನ್ನು ಸರ್ಕಾರ ಜಾರಿ ಮಾಡಿದೆ, ಅದರಲ್ಲಿ ವೈದ್ಯರು ಆಶಾ ಕಾರ್ಯಕರ್ತೆಯರೊಂದಿಗೆ ಮನೆ ಮನೆಗೆ ತೆರಳಿ ಬಿಪಿ, ಶುಗರ್, ಕಣ್ಣು, ಕಾಲುಗಳ ಪರೀಕ್ಷೆ ನಡೆಸಿ ಸಲಹೆ ನೀಡುತ್ತಾರೆ ಎಂದು ತಿಳಿಸಿದರು.

ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ, ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುಬೇರಗೌಡ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಮೈದೂರು ರಾಮಣ್ಣ, ಪುರಸಭಾ ಸದಸ್ಯರಾದ ಲಾಟಿದಾದಾಪೀರ, ವಸಂತಪ್ಪ, ಪಿಕಾರ್ಡ ಬ್ಯಾಂಕ್‌ ಅಧ್ಯಕ್ಷ ರಾಜಪ್ಪ, ನಿರ್ದೇಶಕರಾದ ಮುತ್ತಿಗೆ ಜಂಬಣ್ಣ, ಪಿ.ಬಿ. ಗೌಡ, ಕನಕನ ಬಸ್ಸಾಪುರ ಮಂಜುನಾಥ, ಗ್ರಾಪಂ ಉಪಾದ್ಯಕ್ಷ ಹಾಲಮ್ಮ, ಮುಖಂಡರಾದ ದೇವೇಂದ್ರಗೌಡ, ಮುಖ್ಯ ಶಿಕ್ಷಕ ಓಬಳೇಶ, ದೈಹಿಕ ಶಿಕ್ಷಕ ಜನಾರ್ದನರೆಡ್ಡಿ, ಎಲ್.ಮಂಜನಾಯ್ಕ ಉಪಸ್ಥಿತರಿದ್ದರು.ಸಮುದಾಯ ಭವನ ಬಿಡಿ, ಶಾಲಾ ಅಭಿವೃದ್ಧಿಗೆ ಆದ್ಯತೆ ನೀಡಿ:

ಕ್ಷೇತ್ರದಲ್ಲಿ ಸಂಚಾರ ಮಾಡುವಾಗ ಜನರು ಎಲ್ಲಿ ಹೋದರೂ ಸಮುದಾಯ ಭವನ, ದೇವಸ್ಥಾನಗಳಿಗೆ ಅನುದಾನ ಕೇಳುತ್ತಿದ್ದಾರೆ ಎಂದು ಅಸಮಾದಾನ ವ್ಯಕ್ತಪಡಿಸಿದ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ಅವುಗಳ ಬದಲು ಶಾಲಾ ಕಟ್ಟಡ ಸೇರಿದಂತೆ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ಕೊಡಿ ಎಂದು ಜನರಿಗೆ ಸಲಹೆ ನೀಡಿದರು.ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು, ಆ ನಿಟ್ಟಿನಲ್ಲಿ ಅನುದಾನ ಕೇಳಬೇಕು ಎಂದು ತಿಳಿಸಿದರು.ಕಳೆದ ಒಂದು ವರ್ಷದಲ್ಲಿ ಹರಪನಹಳ್ಳಿ ತಾಲೂಕಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹30 -40 ಲಕ್ಷವನ್ನು ಸಂಸದರ ನಿಧಿಯಿಂದ ನೀಡಿದ್ದೇನೆ. ಪ್ರಾಚೀನ ದೇವಸ್ಥಾನಗಳ ಪುನಶ್ಚೇತನಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಶಿವಮೊಗ್ಗ -ಮರಿಯಮ್ಮನಹಳ್ಳಿ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರನ್ನು ಮೂರು ಬಾರಿ ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿದೆ. ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುತ್ತಾ ಇಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸಂಬಂಧ ಪಟ್ಟವರು ಹೇಳುತ್ತಾರೆ, ಏನಿದೆ ಎಂಬುದನ್ನು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಅವರು ಹೇಳಿದರು.ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಕುಬೇರಗೌಡ, ಗ್ರಾ.ಪಂ ಅಧ್ಯಕ್ಷ ನಾಗರಾಜ, ಉಪಾದ್ಯಕ್ಷೆ ಹಾಲಮ್ಮ, ಪುರಸಭಾ ಸದಸ್ಯರಾದ ಲಾಟಿದಾದಾಪೀರ, ವಸಂತಪ್ಪ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ರಾಜಪ್ಪ, ನಿರ್ದೆಶಕರಾದ ಪಿ.ಬಿ. ಗೌಡ, ಜಂಬಣ್ಣ, ಕನಕನ ಬಸ್ಸಾಪುರ ಮಂಜಣ್ಣ, , ತಾಪಂ ಮಾಜಿ ಸದಸ್ಯ ಮೈದೂರು ರಾಮಣ್ಣ, ದೇವೇಂದ್ರಗೌಡ, ಎಲ್.ಮಂಜನಾಯ್ಕ ಇತರರಿದ್ದರು.