ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಥೈಲ್ಯಾಂಡ್‌ನಲ್ಲಿ ನಡೆಯುವ ೭ನೇ ಅಂತಾರಾಷ್ಟ್ರೀಯ ಥಾಯ್ ಮಾರ್ಷಲ್ ಆರ್ಟ್ಸ್ ಗೇಮ್ಸ್‌ನಲ್ಲಿ ಭಾಗವಹಿಸಲು ಮಂಡ್ಯದಿಂದ ಇಬ್ಬರು, ಮೈಸೂರಿನಿಂದ ನಾಲ್ಕು ಮಂದಿ ಸೇರಿ ಒಟ್ಟು ೬ ಮಂದಿ ಆಯ್ಕೆಯಾಗಿದ್ದಾರೆ ಎಂದು ಓಶೋಕೈ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮುಖ್ಯ ಬೋಧಕ ಎಸ್.ಕೃಷ್ಣಮೂರ್ತಿ ತಿಳಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಡ್ಯದಿಂದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಆರ್.ಶಶಾಂಕ್ ಮತ್ತು ೩ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸೈಯದ್ ಸರ್ಫರಾಜ್ ಅಕ್ಬರ್ ಅವರು ಆಯ್ಕೆಯಾಗಿದ್ದಾರೆ. ಮೈಸೂರಿನಿಂದ ಸಿದ್ದಯ್ಯ ಕೃಷ್ಣಮೂರ್ತಿ, ಆರ್.ದೀಪಕ್, ಎನ್.ಸಂತೋಷ್‌ಕುಮಾರ್, ಜಿ.ಆರ್.ಕರಣ್ ಅವರು ಭಾಗವಹಿಸುತ್ತಿದ್ದಾರೆ. ಒಟ್ಟಾರೆ ೮ ಮಂದಿ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಪಾಸ್‌ಪೋರ್ಟ್ ಸಮಸ್ಯೆಯಿಂದ ಆರ್.ಪಾರಿತೋಷ್ ಮತ್ತು ಮಹೇಶ್‌ದತ್ತ ಜೋಷಿ ಅವರು ಪಂದ್ಯದಿಂದ ಹಿಂದೆ ಸರಿದಿದ್ದಾರೆ ಎಂದರು.
ಭಾರತದಿಂದ ಒಟ್ಟು ೨೧ ಮಂದಿ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳುತ್ತಿದ್ದು, ಕರ್ನಾಟಕದಿಂದ ೬ ಮಂದಿ ತೆರಳುತ್ತಿದ್ದಾರೆ. ಮಂಡ್ಯದ ಶಶಾಂಕ್ ಅವರು ೧ ನಿಮಿಷದಲ್ಲಿ ೬೬ ಕಿಕ್‌ಗಳನ್ನು ಹೊಡೆಯುವ ಮೂಲಕ ವಿಶ್ವದಾಖಲೆ ಮಾಡಿದರೆ, ಮತ್ತೋರ್ವ ಸ್ಪರ್ಧಿ ಸೈಯದ್ ಸರ್ಫ್‌ರಾಜ್ ಅಕ್ಬರ್ ಅವರು ಒಂದು ನಿಮಿಷದಲ್ಲಿ ಗರಿಷ್ಠ ಸಂಖ್ಯೆಯ ಸೈಡ್ ಸಿಟಪ್ ಮತ್ತು ಸ್ವೈಚ್‌ಗಾಗಿ ನೊಬಲ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ ಎಂದು ವಿವರಿಸಿದರು.ವಿದ್ಯಾರ್ಥಿಗಳಾದ ಶಶಾಂಕ್, ಸೈಯದ್ ಸರ್ಫ್‌ರಾಜ್ ಅಕ್ಬರ್, ಚಂದ್ರು ಇತರರು ಗೋಷ್ಠಿಯಲ್ಲಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸನ್ಮಾನಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿ ಸಾಧನೆಗೈದ ಮಂಡ್ಯ ಜಿಲ್ಲೆಯ ವಿದ್ಯಾರ್ಥಿನಿಯರಾದ ಧೃತಿ ಮತ್ತು ಪುನೀತ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಲಾಯಿತು.ಕೆ.ಆರ್.ಪೇಟೆಯ ವಿದ್ಯಾರ್ಥಿನಿ ಧೃತಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕ ಗಳಿಸಿದ್ದು, ಮದ್ದೂರಿನ ವಿದ್ಯಾರ್ಥಿನಿ ಪುನೀತ 625 ಅಂಕಗಳಿಗೆ 624 ಅಂಕ ಗಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ.ಕುಮಾರ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸುವ ಮೂಲಕ ಇಬ್ಬರು ವಿದ್ಯಾರ್ಥಿಗಳು ಜಿಲ್ಲೆ ಮತ್ತು ಇಲಾಖೆಯ ಕೀರ್ತಿಗೆ ಕಾರಣಕರ್ತರಾಗಿದ್ದಾರೆ ಎಂದು ಶ್ಲಾಘಿಸಿದರು.ಬದುಕಿನಲ್ಲಿ ಹೆಸರು, ಸಾಧನೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ. ವಿದ್ಯಾಭ್ಯಾಸದ ಪ್ರತಿ ಹಂತದಲ್ಲೂ ಉತ್ತಮ ಅಂಕಗಳಿಸಬೇಕು. ಸಾಧನೆ, ಯಶಸ್ಸು ನಿಮ್ಮದಾಗಲಿ ಎಂದು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಶಿವರಾಮೇಗೌಡ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಬಿ.ಚಂದ್ರಶೇಖರ, ಶಿಕ್ಷಣಾಧಿಕಾರಿ ಚಂದ್ರಕಾಂತ್ ಹಾಜರಿದ್ದರು.