ಸಾರಾಂಶ
ಈ ಇಬ್ಬರು ಮಕ್ಕಳು ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ನಾಯಿಗಳ ಹಿಂಡು ದಾಳಿ ನಡೆಸಿ ಮಕ್ಕಳನ್ನು ಕೆಳಕ್ಕೆ ಕೆಡವಿಕೊಂಡು ಹೊಟ್ಟೆ, ತಲೆ, ಕಣ್ಣು, ಕೆನ್ನೆ ಭಾಗಗಳನ್ನು ಕಚ್ಚಿ ರಕ್ತ ಸೋರುವಂತೆ ಗಾಯಗೊಳಿಸಿವೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಹೆಣ್ಣು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನಲ್ಲಿ ನಡೆದಿದೆ.ಗಂಜಾಂನ ಒಲೆಕುಯ್ಯೋ ಬೀದಿಯ ನಿವಾಸಿ ಮಂಜುನಾಥ್ ಅವರ ಪುತ್ರಿ 7 ವರ್ಷದ ಭವ್ಯ ಹಾಗೂ ಅದೇ ಬೀದಿಯ ಶಿವು ಅವರ 8 ವರ್ಷದ ಪುತ್ರಿ ಕೀರ್ತನ ಬೀದಿನಾಯಿಗಳ ದಾಳಿಗೊಳಗಾದವರು.
ಈ ಇಬ್ಬರು ಮಕ್ಕಳು ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ನಾಯಿಗಳ ಹಿಂಡು ದಾಳಿ ನಡೆಸಿ ಮಕ್ಕಳನ್ನು ಕೆಳಕ್ಕೆ ಕೆಡವಿಕೊಂಡು ಹೊಟ್ಟೆ, ತಲೆ, ಕಣ್ಣು, ಕೆನ್ನೆ ಭಾಗಗಳನ್ನು ಕಚ್ಚಿ ರಕ್ತ ಸೋರುವಂತೆ ಗಾಯಗೊಳಿಸಿವೆ.ನಾಯಿಗಳ ದಾಳಿಯಿಂದ ಭಯಬೀತರಾದ ಮಕ್ಕಳ ಚೀರಾಟ ಕೇಳಿಸಿಕೊಂಡ ಸ್ಥಳೀಯರು ಓಡಿ ಬಂದು ನಾಯಿಗಳಿಗೆ ಬೆದರಿಸಿ ಓಡಿಸಿದ್ದಾರೆ. ನಾಯಿ ದಾಳಿಯಿಂದ ಗಾಯಗೊಂಡ ಮಕ್ಕಳನ್ನು ಅವರ ಪೋಷಕರಿಗೆ ಮಾಹಿತಿ ನೀಡಿ ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ.
ಸ್ಥಳೀಯರ ಆಕ್ರೋಶ :ಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನಲ್ಲಿ ನೂರಾರು ನಾಯಿಗಳ ಹಿಂಡು ಇವೆ. ಬೀದಿ ಬಳಿ ಆಟವಾಡುವ ಮಕ್ಕಳು ಸೇರಿದಂತೆ ಸಂಚಾರಿಗಳ ಮೇಲೆರಗಿ ಬಂದು ದಾಳಿ ನಡೆಸಿ ಭಯದ ವಾತಾವರಣ ಸೃಷ್ಠಿಸುತ್ತಿವೆ. ನಾಯಿಗಳ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ಎಚ್ಚೆತ್ತು ಕೂಡಲೇ ನಾಯಿಗಳ ಹಿಡಿದು ಬೇರೆಡೆ ಸಾಗಿಸುವ ಕ್ರಮಕ್ಕೆ ಮುಂದಾಗಬೇಕು, ಗಾಯಗೊಂಡ ಮಕ್ಕಳಿಗೆ ಪುರಸಭೆಯಿಂದಲೇ ಪರಿಹಾರ ನೀಡಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿ ಎದುರು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.